Tue. Jun 30th, 2026

ರಾಜ್ಯ ಬಿಜೆಪಿಯಲ್ಲಿ ಆಡಿಯೋ ಬಾಂಬ್ ತಲ್ಲಣ: ವಿಜಯೇಂದ್ರ ಪದವಿಚ್ಯುತಿ ಪಿತೂರಿ ಆರೋಪಕ್ಕೆ ಸದಾನಂದ ಗೌಡರ ಖಡಕ್ ಪ್ರತಿಕ್ರಿಯೆ

Share this with Friends

ಬೆಂಗಳೂರು:ರಾಜ್ಯ ಬಿಜೆಪಿಯ ಆಂತರಿಕ ವಲಯದಲ್ಲಿ ಭಿನ್ನಮತದ ಬೆಂಕಿ ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಷಡ್ಯಂತ್ರದ ಕುರಿತಾದ ಆಡಿಯೋ ಕ್ಲಿಪ್‌ ಒಂದರ ಸೋರಿಕೆ ಇಡೀ ಕಮಲ ಪಾಳಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ದೆಹಲಿ ಮಟ್ಟದ ಪ್ರಭಾವಿ ನಾಯಕರೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.

ವೈರಲ್ ಆಡಿಯೋ ಸಂಭಾಷಣೆಯಲ್ಲೇನಿದೆ?:

ಸೋರಿಕೆಯಾಗಿರುವ ಆಡಿಯೋದಲ್ಲಿ, ಬಿ.ವೈ. ವಿಜಯೇಂದ್ರ ಅವರ ಮೂರು ವರ್ಷಗಳ ಅಧ್ಯಕ್ಷ ಅವಧಿ ಪೂರ್ಣಗೊಳ್ಳಲು ಇನ್ನೂ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ತಕ್ಷಣವೇ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ ಪಕ್ಷಕ್ಕೆ ‘ಲಿಂಗಾಯತ ವಿರೋಧಿ’ ಎಂಬ ಹಣೆಪಟ್ಟಿ ಬರುವ ಅಪಾಯವಿದೆ ಮತ್ತು ಇದು ಪಕ್ಷದ ವರ್ಚಸ್ಸಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಬಹುದು ಎಂದು ವಿವರಿಸಲಾಗಿದೆ. ಆದ್ದರಿಂದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳವರೆಗೆ ಕಾಯ್ದು, ಆ ಬಳಿಕ ಅವರನ್ನು ಆ ಸ್ಥಾನದಿಂದ ಸಂಪೂರ್ಣವಾಗಿ “ಕಿತ್ತು ಬಿಸಾಕಬೇಕು” ಎಂದು ಆಡಿಯೋದಲ್ಲಿರುವ ಧ್ವನಿ ಸಲಹೆ ನೀಡಿದೆ ಎನ್ನಲಾಗಿದೆ.

ನೋ ಕಾಮೆಂಟ್ಸ್, ನಾನೇನು ಕಳ್ಳನಲ್ಲ: ಸದಾನಂದ ಗೌಡರ ಆಕ್ರೋಶ

ಈ ವಿವಾದಾತ್ಮಕ ಆಡಿಯೋ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. “ಆ ವೈರಲ್ ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ, ಅದು ನಕಲಿ. ನನ್ನದಲ್ಲದ ಆಡಿಯೋ ಅಥವಾ ವಿಡಿಯೋಗಳ ಬಗ್ಗೆ ನಾನು ಇದುವರೆಗೆ ತಲೆಕೆಡಿಸಿಕೊಂಡಿಲ್ಲ ಮತ್ತು ಮುಂದೆ ಉತ್ತರ ಕೊಡುವುದೂ ಇಲ್ಲ. ಸತ್ಯ ಏನೆಂಬುದನ್ನು ಮಾಧ್ಯಮಗಳೇ ತನಿಖೆ ನಡೆಸಿ ಕಂಡುಹಿಡಿಯಲಿ. ನಾನೇನು ತಪ್ಪು ಮಾಡಿಲ್ಲ, ಕಳ್ಳನಾಗಿದ್ದರೆ ಬಾಗಿಲು ಹಾಕಿಕೊಂಡು ಮನೆಯೊಳಗೆ ಕೂರುತ್ತಿದ್ದೆ” ಎಂದು ಗುಡುಗಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಈ ವಿಷಯದಲ್ಲಿ ತಾವು ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಒಂದು ವೇಳೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಈ ವಿಷಯವಾಗಿ ನನ್ನ ಬಳಿ ವಿವರಣೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸುತ್ತೇನೆ. ಬೇಕಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ನನ್ನನ್ನು ಮುಖಾಮುಖಿ ಕೂರಿಸಿ ಮಾತನಾಡಿಸಿ” ಎಂದು ಹೈಕಮಾಂಡ್‌ಗೆ ಮುಕ್ತ ಸವಾಲು ಹಾಕಿದ್ದಾರೆ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ವಿದ್ಯಮಾನಗಳ ಬೆನ್ನಲ್ಲೇ ಈ ಆಡಿಯೋ ಲೀಕ್ ಆಗಿರುವುದು ರಾಜ್ಯ ಬಿಜೆಪಿಯ ಒಳಗಿನ ಭಿನ್ನಮತ ಹಾದಿ ರಂಪವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

 

 


Share this with Friends

Related Post