ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ (Minimum Government, Maximum Governance) ದೂರದೃಷ್ಟಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ದೇಶದಲ್ಲಿ ತಂತ್ರಜ್ಞಾನ ಆಧಾರಿತ ಪಾರದರ್ಶಕತೆಯನ್ನು ಹೆಚ್ಚಿಸಲು ‘ಎಫ್‌ಸಿಆರ್‌ಎ 2.0 ಪೋರ್ಟಲ್’ (FCRA 2.0) ಮತ್ತು ‘ಇ-ಒಸಿಐ ಕಾರ್ಡ್’ (e-OCI) ಸೌಲಭ್ಯಗಳನ್ನು ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ದಾರೆ.
ಈ ಕುರಿತುಮಾಹಿತಿ ಹಂಚಿಕೊಂಡಿರುವ ಗೃಹ ಸಚಿವರು, ಹೊಸ ಡಿಜಿಟಲ್ ವ್ಯವಸ್ಥೆಯು ಕಾಗದ ರಹಿತ ಆಡಳಿತ ಮತ್ತು ನಾಗರಿಕ ಸ್ನೇಹಿ ಸೇವೆಗಳಿಗೆ ದಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗೆ ಎಫ್‌ಸಿಆರ್‌ಎ 2.0 ಕವಚ:
ವಿದೇಶಿ ದೇಣಿಗೆಗಳನ್ನು ಪಡೆಯುವ ಸಂಸ್ಥೆಗಳಿಗೆ ಹೊಸ ‘ಎಫ್‌ಸಿಆರ್‌ಎ 2.0 ಪೋರ್ಟಲ್’ ಅತ್ಯಂತ ಸುಲಭ ಹಾಗೂ ಸರಳವಾದ ಡಿಜಿಟಲ್ ಅನುಭವವನ್ನು ನೀಡಲಿದೆ. ಇದು ಕಾಗದದ ಕೆಲಸಗಳನ್ನು (Paperwork) ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಸಮಯವನ್ನು ಉಳಿಸಲಿದೆ. ಇದರೊಂದಿಗೆ ವಿದೇಶಿ ಕೊಡುಗೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಕಣ್ಗಾವಲನ್ನು ಈ ಪೋರ್ಟಲ್ ಮತ್ತಷ್ಟು ಚುರುಕುಗೊಳಿಸಲಿದೆ. ತನ್ಮೂಲಕ ದೇಶದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಇದು ಮತ್ತೊಂದು ಪ್ರಮುಖ ಕವಚವಾಗಿ ಕೆಲಸ ಮಾಡಲಿದೆ ಎಂದು ಅಮಿತ್ ಶಾ ವಿವರಿಸಿದ್ದಾರೆ.
50 ಲಕ್ಷಕ್ಕೂ ಅಧಿಕ ಅನಿವಾಸಿ ಭಾರತೀಯರಿಗೆ ಇ-ಒಸಿಐ ವರ:
ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ‘ಇ-ಒಸಿಐ ಕಾರ್ಡ್’ (e-OCI Card) ಸೌಲಭ್ಯವು ಜಗತ್ತಿನಾದ್ಯಂತ ಇರುವ 50 ಲಕ್ಷಕ್ಕೂ ಹೆಚ್ಚು ಒಸಿಐ ಕಾರ್ಡ್‌ದಾರರಿಗೆ (Overseas Citizenship of India) ಅತ್ಯಂತ ವೇಗದ ಮತ್ತು ತಡೆರಹಿತ ಸೇವೆಗಳನ್ನು ಒದಗಿಸಲಿದೆ. ಈ ನೂತನ ವ್ಯವಸ್ಥೆಯು ಒಸಿಐ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ.
ಇನ್ಮುಂದೆ ನಾಗರಿಕರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ, ಡಿಜಿಟಲ್ ಕಾರ್ಡ್ ಪಡೆಯಬಹುದು. ಯಾವುದೇ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲದೆ, ಮೊಬೈಲ್ ಮೂಲಕವೇ 24/7 ಈ ಸೇವೆಯನ್ನು ಪ್ರವೇಶಿಸಬಹುದಾಗಿದೆ. ಇದು ವೀಸಾ ಮತ್ತು ನಾಗರಿಕತ್ವ ಪ್ರಕ್ರಿಯೆಗಳನ್ನು ಅತ್ಯಂತ ಸರಳ ಹಾಗೂ ಸುಲಭಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

