ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಗಿಡ ನೆಡುವ ಕಾರ್ಯಕ್ರಮದ ಹೆಸರಿನಲ್ಲಿ ಅತಿಯಾದ ವೆಚ್ಚ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು ಗಂಭೀರ ಆರೋಪ ಮಾಡಿದ್ದಾರೆ.
ಇಂದುನಡೆದ ಜಿಬಿಎ (GBA) ಸಭೆಯಲ್ಲಿ ಸಚಿವರು ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಬಿಬಿಎಂಪಿ ವತಿಯಿಂದ ನಗರದಲ್ಲಿ ಕೇವಲ ಒಂದು ಗಿಡ ನೆಡಲು ಬರೋಬ್ಬರಿ 3,300 ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೇವಲ ಗಿಡ ನೆಡಲು ಗುಂಡಿ ತೋಡುವುದಕ್ಕಾಗಿಯೇ 300 ರೂ. ಮೀಸಲಿಡಲಾಗಿದೆ. ಆದರೆ, ತಮ್ಮ ಸ್ವಕ್ಷೇತ್ರದಲ್ಲಿ ನೆಡಲಾದ ಯಾವ ಗಿಡಕ್ಕೂ ನಿಯಮದ ಪ್ರಕಾರ ಸರಿಯಾದ ಗುಂಡಿ ತೋಡಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ನೇರ ಸವಾಲು ಹಾಕಿದರು. ಫುಟ್‌ಪಾತ್ ಹಾಗೂ ಮೀಡಿಯನ್‌ಗಳ ಮೇಲೆ ಮೇಲ್ನೋಟಕ್ಕೆ ಗಿಡಗಳನ್ನು ಇರಿಸಲಾಗಿದೆಯೇ ಹೊರತು, ವೈಜ್ಞಾನಿಕವಾಗಿ ಗುಂಡಿಗಳನ್ನು ಮಾಡಿಲ್ಲ. ಹೀಗಾಗಿ ಗುಂಡಿ ತೋಡಲು ಇಟ್ಟಿದ್ದ 300 ರೂ. ಹಣವನ್ನು ಅಧಿಕಾರಿಗಳು ನೇರವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ನೀಡಲಾಗದೆ ಅಧಿಕಾರಿಗಳು ಗಪ್‌ಚುಪ್:
ಕಳೆದ 20 ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ? ನಗರದಲ್ಲಿ ಮರಗಣತಿ (Tree Census) ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ? ಮತ್ತು ನೆಟ್ಟ ಗಿಡಗಳು ಮರಗಣತಿಯ ಲೆಕ್ಕಾಚಾರದಲ್ಲಿ ಪ್ರತಿಫಲಿಸುತ್ತಿವೆಯೇ? ಎಂದು ಸಚಿವರು ಸಭೆಯಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು. ಆದರೆ ಈ ಯಾವುದೇ ಪ್ರಶ್ನೆಗಳಿಗೂ ಸೂಕ್ತ ಹಾಗೂ ಸಮರ್ಪಕ ವಿವರಣೆ ನೀಡಲು ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾದರು.
ಬೀದಿ ನಾಯಿಗಳ ಸಮಸ್ಯೆಗೂ ಮುಕ್ತಿ ಸಿಗಲಿ:
ಇದೇ ಸಭೆಯಲ್ಲಿ ನಗರದ ಮತ್ತೊಂದು ಪ್ರಮುಖ ಸಮಸ್ಯೆಯಾದ ಬೀದಿ ನಾಯಿಗಳ ಹಾವಳಿಯ ಕುರಿತು ಚರ್ಚಿಸಲಾಯಿತು. ಕಳೆದ 50 ವರ್ಷಗಳಿಂದ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಮಸ್ಯೆ ಜೀವಂತವಾಗಿದೆ ಎಂದ ಸಚಿವರು, ಈ ಸಮಸ್ಯೆಗೆ ಕಟ್ಟುನಿಟ್ಟಾದ ಕಾನೂನಾತ್ಮಕ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಲಾಖೆಯ ಕೆಲಸಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

