Tue. Jun 30th, 2026

ಕೆಇಎ ಮಹತ್ವದ ಪ್ರಕಟಣೆ: ಸಿಇಟಿ ಅಣಕು ಸೀಟು ಹಂಚಿಕೆ ಬಳಿಕ ಆಪ್ಷನ್ ಎಂಟ್ರಿಗೆ ಮತ್ತೊಂದು ಸುವರ್ಣಾವಕಾಶ!

Share this with Friends

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಇಚ್ಛೆ/ಆಯ್ಕೆಗಳನ್ನು (Options Entry) ದಾಖಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕ ಇಂದಿಗೆ ಮುಗಿದಿದೆ. ಆದರೆ, ಇದುವರೆಗೆ ಆಪ್ಷನ್ಸ್ ದಾಖಲಿಸದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮತ್ತೊಂದು ಬಿಗ್ ರಿಲೀಫ್ ನೀಡಿದ್ದು, ಅಣಕು ಸೀಟು ಹಂಚಿಕೆ (Mock Allotment) ಫಲಿತಾಂಶ ಪ್ರಕಟವಾದ ಬಳಿಕ ಮತ್ತೊಮ್ಮೆ ಆಪ್ಷನ್ಸ್ ದಾಖಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗೊಂದಲ ಬೇಡ – ಹೆಚ್. ಪ್ರಸನ್ನ ಸಲಹೆ:

ಈ ಕುರಿತು ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಆತಂಕ ಅಥವಾ ಗೊಂದಲ ಬೇಡ ಎಂದು ಕೆಇಎ ಸ್ಪಷ್ಟಪಡಿಸಿದೆ. ಸಾಕಷ್ಟು ಸಮಯ ನೀಡಿದ್ದರೂ ಸಹ ಕೆಲ ಅಭ್ಯರ್ಥಿಗಳು ಇನ್ನೂ ಆಪ್ಷನ್ಸ್ ದಾಖಲಿಸಿಲ್ಲ. ಅಂತಹ ವಿದ್ಯಾರ್ಥಿಗಳು ಅಣಕು ಫಲಿತಾಂಶ ಪ್ರಕಟವಾಗುವವರೆಗೆ ತಮಗೆ ಇಷ್ಟವಿರುವ ಕಾಲೇಜು ಮತ್ತು ಕೋರ್ಸ್‌ಗಳ ಪಟ್ಟಿಯನ್ನು ಒಂದು ಕಡೆ ಬರೆದಿಟ್ಟುಕೊಳ್ಳಬೇಕು. ಮೊದಲ ಸುತ್ತಿನ ಅಣಕು ಫಲಿತಾಂಶ ಹೊರಬಂದ ನಂತರ ಹೊಸದಾಗಿ ಆಪ್ಷನ್ಸ್ ಸೇರಿಸಲು, ಬದಲಿಸಲು ಅಥವಾ ಹೊಸ ಅಭ್ಯರ್ಥಿಗಳು ನೋಂದಾಯಿಸಲು ಪೂರ್ಣ ಅವಕಾಶವಿರಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಜುಲೈ 8 ರವರೆಗೆ ಗಡುವು ವಿಸ್ತರಣೆ:

ಒಳ ಮೀಸಲಾತಿ ನಿಯಮದ ಪ್ರಕಾರ ಹೊಸದಾಗಿ ಜಾತಿ ಪ್ರಮಾಣ ಪತ್ರ ಪಡೆದು, ಅದರ ಆರ್‌ಡಿ (RD) ಸಂಖ್ಯೆಯನ್ನು ನಮೂದಿಸದ ಇನ್ನೂ ಸುಮಾರು 12,000 ಪರಿಶಿಷ್ಟ ಜಾತಿಯ (SC) ಅಭ್ಯರ್ಥಿಗಳು ಬಾಕಿ ಉಳಿದಿದ್ದಾರೆ. ಆರ್‌ಡಿ ಸಂಖ್ಯೆ ನಮೂದಿಸಿದರೆ ಮಾತ್ರ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂತಹ ಅಭ್ಯರ್ಥಿಗಳಿಗೆ ಹೊಸ ಆರ್‌ಡಿ ಸಂಖ್ಯೆ ನಮೂದಿಸಿ, ವೆರಿಫಿಕೇಷನ್ ಸ್ಲಿಪ್ ಪಡೆಯಲು ಜುಲೈ 8ರವರೆಗೆ ಸಮಯ ವಿಸ್ತರಿಸಲಾಗಿದೆ. ಈ ವಿದ್ಯಾರ್ಥಿಗಳಿಗೂ ಅಣಕು ಫಲಿತಾಂಶದ ಬಳಿಕವೇ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ ಎಂದು ಹೆಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಜುಲೈ 3ಕ್ಕೆ 70 ಕ್ರೀಡಾಪಟುಗಳ ದಾಖಲೆ ಪರಿಶೀಲನೆ:

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕ್ರೀಡಾ ಕೋಟಾದಡಿ (Sports Quota) ಅರ್ಜಿ ಸಲ್ಲಿಸಿರುವ ಒಟ್ಟು 70 ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಬಾಕಿ ಉಳಿದಿದೆ. ಇಂತಹ ಅಭ್ಯರ್ಥಿಗಳು ಜುಲೈ 3ರಂದು ತಮ್ಮ ಕ್ರೀಡಾ ಪದಕಗಳ ಮೂಲ ಪ್ರಮಾಣ ಪತ್ರಗಳೊಂದಿಗೆ ಕೆಇಎ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ದಾಖಲೆ ಪರಿಶೀಲನೆಗೆ ಬರಬೇಕಾದ 70 ಅಭ್ಯರ್ಥಿಗಳ ನಿಖರ ಪಟ್ಟಿಯನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ಹಾಜರಾಗಬೇಕಿದೆ.

 


Share this with Friends

Related Post