ಬೆಂಗಳೂರು:ರಾಜ್ಯದಲ್ಲಿ ಜೂನ್ 30 ರಿಂದ ಆರಂಭವಾಗಲಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆ ಆರಂಭವಾಗಲಿದ್ದು,ಇದು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಶುದ್ಧೀಕರಿಸುವ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎಸ್ಐಆರ್ ಕುರಿತು ಸಾರ್ವಜನಿಕರಲ್ಲಿರುವ ಗೊಂದಲಗಳನ್ನು ನಿವಾರಿಸಲು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡ ಅವರು, ಈ ತಪಾಸಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಜಾರಿಯಾಗುವ ಯಾವುದೇ ನೋಟಿಸ್‌ಗಳನ್ನು ‘ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ’ ಎಂದು ಭಾವಿಸಬಾರದು. ವಿವರಗಳಲ್ಲಿ ತಪ್ಪುಗಳಿದ್ದಾಗ ಅಥವಾ ಗೊಂದಲವಿದ್ದಾಗ ಮಾತ್ರ ಸ್ಪಷ್ಟನೆಗಾಗಿ ನೋಟಿಸ್ ನೀಡಲಾಗುತ್ತದೆಯೇ ಹೊರತು, ಯಾರ ಹೆಸರನ್ನೂ ಕಾನೂನುಬಾಹಿರವಾಗಿ ತೆಗೆದುಹಾಕುವುದಿಲ್ಲ ಎಂದರು.
ಮಲ್ಟಿಪಲ್ ಐಡಿ ಹೊಂದಿರುವವರಿಗೆ ಕಿವಿಮಾತು: ಸ್ವಂತ ಊರು ಮತ್ತು ಕೆಲಸ ಮಾಡುವ ನಗರ ಹೀಗೆ ಎರಡು ಬೇರೆ ಬೇರೆ ಕಡೆಗಳಲ್ಲಿ ವೋಟರ್ ಐಡಿ ಹೊಂದಿರುವವರು ಕಡ್ಡಾಯವಾಗಿ ಒಂದನ್ನು ಮಾತ್ರ ಉಳಿಸಿಕೊಳ್ಳಬೇಕು. ನೀವು ಯಾವ ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಬಯಸುತ್ತೀರೋ, ಅಲ್ಲಿ ಮಾತ್ರ ಬಿಎಲ್‌ಒಗಳಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕು. ಉಳಿದ ಹೆಚ್ಚುವರಿ ಕಾರ್ಡ್‌ಗಳು ಪರಿಶೀಲನೆಯ ನಂತರ ತಂತಾನೇ ರದ್ದಾಗಲಿವೆ ಎಂದರು.
ಆಧುನಿಕ ಸಾಫ್ಟ್‌ವೇರ್ ಬಳಕೆ: ನಕಲಿ ವೋಟರ್ ಐಡಿಗಳನ್ನು ಮತ್ತು ಒಂದೇ ರೀತಿಯ ಫೋಟೋ ಹೊಂದಿರುವ ನಕಲಿ ಹೆಸರುಗಳನ್ನು ಪತ್ತೆ ಹಚ್ಚಲು ಈ ಬಾರಿ ವಿಶೇಷ ‘ಫೋಟೋ ಸಿಮಿಲಾರಿಟಿ ಸಾಫ್ಟ್‌ವೇರ್’ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಸಿಇಒ ತಿಳಿಸಿದ್ದಾರೆ.
ಮನೆ-ಮನೆ ಪರಿಶೀಲನೆಗೆ ಸಿದ್ಧತೆ:
ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಸುಮಾರು 5.55 ಕೋಟಿ ಮತದಾರರಿದ್ದರೂ, ಚುನಾವಣಾ ಆಯೋಗವು ಪ್ರತಿಯೊಬ್ಬರಿಗೂ ಹಂಚಲು 11 ಕೋಟಿಗೂ ಹೆಚ್ಚು ಕಸ್ಟಮೈಸ್ಡ್ (ವಿಶೇಷ ಕ್ಯೂಆರ್ ಕೋಡ್ ಹೊಂದಿರುವ) ಫಾರ್ಮ್‌ಗಳನ್ನು ಮುದ್ರಿಸಿದೆ ಎಂದರು.
ಮತದಾರರು ತಮ್ಮ ಮನೆಗೆ ಬರುವ ಅಧಿಕಾರಿಗಳಿಗೆ ಆಧಾರ್ ಮತ್ತು ವಿಳಾಸದ ಪುರಾವೆಗಳನ್ನು ನೀಡಿ ಸಹಕರಿಸಬೇಕು. ಜೊತೆಗೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕವೂ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದರು.

