Mon. Jun 29th, 2026

ವಿದ್ಯುತ್ ನಿಗಮಗಳ ಖಾಸಗೀಕರಣ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನವೆಂದ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು:ರಾಜ್ಯದ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ತಾವು ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಗಂಭೀರ ವಿಷಯವನ್ನು ಮುಂದಿನ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ಮಂಡಿಸಿ, ವಿದ್ಯುತ್ ಇಲಾಖೆಯ ನೌಕರರ ಒಕ್ಕೂಟದ ಅಭಿಪ್ರಾಯ ಮತ್ತು ಹಿತಾಸಕ್ತಿಗೆ ಅನುಗುಣವಾಗಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ವಿರುದ್ಧ ವಾಗ್ದಾಳಿ:

ವಿದ್ಯುತ್ ವಲಯದ ಖಾಸಗೀಕರಣದ ನೀತಿಯ ಹಿನ್ನೆಲೆಯನ್ನು ನೆನಪಿಸಿದ ಡಿ.ಕೆ. ಶಿವಕುಮಾರ್, “ವಿದ್ಯುತ್ ನಿಗಮಗಳನ್ನು ಖಾಸಗಿ ಹೆಗಲಿಗೆ ಒಪ್ಪಿಸಬಾರದು ಎಂದು ನೀವೀಗ ಹೋರಾಟ ಮಾಡುತ್ತಿದ್ದೀರಿ. ಆದರೆ, ಈ ಖಾಸಗೀಕರಣದ ಪ್ರಸ್ತಾಪ ಮುನ್ನೆಲೆಗೆ ಬಂದಿದ್ದು 2003ರಲ್ಲಿ. ಇದಕ್ಕೆ ಸಂಬಂಧಿಸಿದ ಕಾನೂನನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಅಂದು ಕಾನೂನು ತಂದಾಗ ಯಾರೂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ, ಪ್ರತಿಭಟಿಸಲಿಲ್ಲ. ಈಗ ನಮ್ಮ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡುತ್ತಿದ್ದೀರಿ. ತಪ್ಪು ಮಾಡಿದವರನ್ನು ಖಂಡಿಸುವ ಮತ್ತು ಒಳ್ಳೆಯ ಕೆಲಸ ಮಾಡಿದವರನ್ನು ಬೆಂಬಲಿಸುವ ಗುಣ ನಮ್ಮದಾಗಬೇಕು” ಎಂದು ನೌಕರರಿಗೆ ಕಿವಿಮಾತು ಹೇಳಿದರು.

ಲೈನ್ ಎಳೆದವರು ನೀವು, ಲಾಭ ಮಾಡುವುದು ಖಾಸಗಿಯವರಾ?:

ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಬಿಜೆಪಿಯವರು ಸದಾ ಸರ್ಕಾರದ ವಿರುದ್ಧ ಟೀಕೆಗಳನ್ನೇ ಮಾಡುತ್ತಿರುತ್ತಾರೆ. ಅವರ ಟೀಕೆಗಳು ಕಾಲಕ್ರಮೇಣ ಮರೆಯಾಗುತ್ತವೆ, ಆದರೆ ನಮ್ಮ ಸರ್ಕಾರ ಮಾಡುವ ಜನಪರ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ನೀವೆಲ್ಲರೂ ನಮ್ಮ ಸರ್ಕಾರದ ಶಕ್ತಿಯಾಗಿದ್ದೀರಿ. ಮುಂಬೈ, ದೆಹಲಿ ಸೇರಿದಂತೆ ದೇಶದ ಹಲವು ದೊಡ್ಡ ನಗರಗಳಲ್ಲಿ ಈಗಾಗಲೇ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸಲಾಗಿದೆ. ನೂರಾರು ವರ್ಷಗಳಿಂದ ಕಷ್ಟಪಟ್ಟು ವಿದ್ಯುತ್ ಲೈನ್‌ಗಳನ್ನು ಎಳೆದು ಜಾಲ ನಿರ್ಮಿಸಿದವರು ನೀವು ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಸರ್ಕಾರ. ಆದರೆ, ಈಗ ಖಾಸಗಿ ಕಂಪನಿಗಳು ಬಂದು ಸುಲಭವಾಗಿ ಹಣ ಮಾಡಲು ಅವರಿಗೆ ಸಂಪರ್ಕ ಕಲ್ಪಿಸುವ ಹಕ್ಕು ನೀಡಬೇಕೇ?” ಎಂದು ಪ್ರಶ್ನಿಸುವ ಮೂಲಕ ಖಾಸಗೀಕರಣದ ನೀತಿಯನ್ನು ತೀವ್ರವಾಗಿ ಆಕ್ಷೇಪಿಸಿದರು.

ಖಾಸಗೀಕರಣಕ್ಕೆ ಬ್ರೇಕ್ ಮತ್ತು ಸಂಪುಟ ಚರ್ಚೆ: ಖಾಸಗೀಕರಣ ನೀತಿಯನ್ನು ವಿರೋಧಿಸುತ್ತಿರುವ ನೌಕರರ ಪರ ನಿಂತ ಡಿ.ಕೆ. ಶಿವಕುಮಾರ್, “ಇಂಧನ ಸಚಿವ ಕೆ.ಜೆ. ಜಾರ್ಜ್ ಅವರೂ ಕೂಡ ಖಾಸಗೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಆದರೆ ಸರ್ಕಾರಕ್ಕೆ ನಿಮ್ಮ ಬೆಂಬಲವೂ ಮುಖ್ಯ” ಎಂದು ನೌಕರರಿಗೆ ಕಿವಿಮಾತು ಹೇಳಿದರು.

ಲಂಚ ಮುಕ್ತ ನೇಮಕಾತಿ ಮತ್ತು ವೇತನ ಸುಧಾರಣೆ: “ನನ್ನ ಹಿಂದಿನ ಅವಧಿಯಲ್ಲಿ ಒಂದು ರೂಪಾಯಿ ಲಂಚವಿಲ್ಲದೆ 25 ಸಾವಿರ ಜನರನ್ನು ಪಾರದರ್ಶಕವಾಗಿ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ನೌಕರರ ಅನುಕೂಲಕ್ಕಾಗಿ ವೇತನ ಪರಿಷ್ಕರಣೆಯ ಅವಧಿಯನ್ನು 7 ವರ್ಷಗಳಿಂದ 5 ವರ್ಷಕ್ಕೆ ಕಡಿತಗೊಳಿಸಲಾಗಿತ್ತು” ಎಂದು ಹಳೆಯ ಸಾಧನೆಗಳನ್ನು ಸ್ಮರಿಸಿದರು.

ವಿದ್ಯುತ್ ಸೋರಿಕೆ ಇಳಿಕೆ ಮತ್ತು ಪಾವಗಡ ಸೋಲಾರ್ ಕ್ರಾಂತಿ: ಭೂಸ್ವಾಧೀನ ಮಾಡಿಕೊಳ್ಳದೆಯೇ 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪಾವಗಡದ ಬೃಹತ್ ಸೋಲಾರ್ ಪಾರ್ಕ್ ದೇಶಕ್ಕೇ ಮಾದರಿಯಾಗಿದೆ. ಇದರೊಂದಿಗೆ ಇಲಾಖೆಯಲ್ಲಿದ್ದ ಶೇಕಡಾ 19 ರಷ್ಟು ವಿದ್ಯುತ್ ಸೋರಿಕೆಯನ್ನು ಶೇಕಡಾ 10ಕ್ಕೆ ಇಳಿಸಿ ಇತಿಹಾಸ ಸೃಷ್ಟಿಸಲಾಗಿದೆ ಎಂದು ಸಿಎಂ ವಿವರಿಸಿದರು.

ಕಲ್ಪವೃಕ್ಷ ಇಂದಿರಾ ಗಾಂಧಿ ಕೊಡುಗೆ: ಇಂಧನ ಇಲಾಖೆಯ ಸಿಬ್ಬಂದಿಯನ್ನು “ಕತ್ತಲೆ ದೂರ ಮಾಡುವ ಕಾಯಕ ಜೀವಿಗಳು” ಎಂದು ಬಣ್ಣಿಸಿದ ಅವರು, “ನಿಮ್ಮ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳು ಮಂಡಳಿಯಲ್ಲಿ ಇರುವಂತೆ ಮಾಡಿ, ಸಿಬ್ಬಂದಿಯ ಧ್ವನಿಗೆ ಶಕ್ತಿ ಕೊಟ್ಟವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು. ಮೂಲವನ್ನು ಮರೆತರೆ ಯಶಸ್ಸು ಸಾಧ್ಯವಿಲ್ಲ” ಎಂದರು.

 

 


Share this with Friends

Related Post