Mon. Jun 29th, 2026

ಮಕ್ಕಳಿಗೆ ಕನ್ನಡ ಓದು, ಬರಹ ಕಲಿಸುವುದು ಇಂದಿನ ಅನಿವಾರ್ಯತೆ: ಸಚಿವ ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು:ರಾಜಧಾನಿಯ ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣವಾದ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ನವೀಕೃತಗೊಂಡಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆಯ ನೂತನ ಆವರಣ ಹಾಗೂ ಕನ್ನಡ ಧ್ವಜಸ್ತಂಭವನ್ನು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅವರು ಕುವೆಂಪು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಕನ್ನಡ ಸಾಧಕರಿಗೆ ಸನ್ಮಾನ:

ಲೋಕಾರ್ಪಣಾ ಕಾರ್ಯಕ್ರಮದ ಬಳಿಕ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕುವೆಂಪು ನೆನಪು’ ಸಭಾ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯದ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಹಿರಿಯ ಕನ್ನಡ ಹೋರಾಟಗಾರ ಸಾ.ರಾ. ಗೋವಿಂದು, ಪೊಲೀಸ್ ಮುಖ್ಯ ಪೇದೆ ಎಂ. ಮಹದೇವಸ್ವಾಮಿ ಸೇರಿದಂತೆ ಹಲವು ಗಣ್ಯರನ್ನು ವೇದಿಕೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಕುವೆಂಪು ಆವರಣದ ಸೌಂದರ್ಯೀಕರಣ:

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ಸ್ವಾತಂತ್ರ್ಯ ಉದ್ಯಾನವನದಲ್ಲಿ ಕುವೆಂಪು ಅವರ ಪ್ರತಿಮೆಯನ್ನು ಸ್ಥಾಪಿಸಿ ಸುಮಾರು 12 ವರ್ಷಗಳಾಗಿವೆ. ಇದೀಗ ಈ ಆವರಣವನ್ನು ಮರುರೂಪಿಸಿ ಮತ್ತಷ್ಟು ಸುಂದರಗೊಳಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಭೇಟಿ ನೀಡುವ ಜನರಿಗೆ ಕುವೆಂಪು ಅವರ ಶ್ರೇಷ್ಠತೆ ಮತ್ತು ಅವರ ಸಾಹಿತ್ಯದ ಆಳ ಅರಿವಾಗುವಂತೆ ಈ ಪರಿಸರವನ್ನು ಸದಾ ಸ್ವಚ್ಛ ಹಾಗೂ ಆಕರ್ಷಕವಾಗಿಡುವುದು ನಮ್ಮ ಜವಾಬ್ದಾರಿ” ಎಂದರು.

ಮಕ್ಕಳಲ್ಲಿ ಹೆಚ್ಚಬೇಕಿದೆ ಕನ್ನಡದ ಆಸಕ್ತಿ:

ಭಾಷೆಯ ಬೆಳವಣಿಗೆಯ ಕುರಿತು ಕಳಕಳಿ ವ್ಯಕ್ತಪಡಿಸಿದ ಸಚಿವರು, “ಒಂದೆಡೆ ಭಾಷೆಯ ಉಳಿವಿಗಾಗಿ ಹೋರಾಟಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಭಾಷೆಯನ್ನು ಬೆಳೆಸುವ ಸೃಜನಾತ್ಮಕ ಕೆಲಸಗಳು ನಿರಂತರವಾಗಿ ನಡೆಯಬೇಕು. ಇಂದಿನ ದಿನಗಳಲ್ಲಿ ಎಷ್ಟೋ ಮಕ್ಕಳಿಗೆ ಕನ್ನಡ ಮಾತನಾಡಲು ಬರುತ್ತದೆ, ಆದರೆ ಅವರಿಗೆ ಓದಲು ಮತ್ತು ಬರೆಯಲು ಬರುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವವರ ಸಂಖ್ಯೆ ಕ್ಷೀಣಿಸುತ್ತದೆ. ಆದ್ದರಿಂದ ಮಕ್ಕಳಲ್ಲಿ ಕನ್ನಡ ಓದುವ ಮತ್ತು ಬರೆಯುವ ಆಸಕ್ತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ನಾವೆಲ್ಲರೂ ಒಟ್ಟಾಗಿ ಕನ್ನಡದ ಈ ಜಾಗೃತಿ ಕೆಲಸವನ್ನು ಮಾಡಬೇಕಿದೆ” ಎಂದು ಕರೆ ನೀಡಿದರು.


Share this with Friends

Related Post