Mon. Jun 29th, 2026

ಮೆಡಿಕವರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪವಾಡ: 4.5 ಕೆಜಿ ತೂಕದ ಬೃಹತ್ ಕಿಡ್ನಿಗಳ ಯಶಸ್ವಿ ಶಸ್ತ್ರಚಿಕಿತ್ಸೆ!

Share this with Friends

ಬೆಂಗಳೂರು:ರಾಜಧಾನಿಯ ಮೆಡಿಕವರ್ ಆಸ್ಪತ್ರೆಯ ನುರಿತ ವೈದ್ಯರ ತಂಡವು ಅತ್ಯಂತ ಜಟಿಲ ಹಾಗೂ ಜೀವನ್ಮರಣದ ಸವಾಲಾಗಿದ್ದ ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದೆ. ಡಾ. ಮಹದೇವ್ ದೇಸಾಯಿ ಹಾಗೂ ಡಾ. ದಿಲೀಪ್ ನೇತೃತ್ವದ ತಜ್ಞರ ತಂಡವು 47 ವರ್ಷದ ರೋಗಿಯೊಬ್ಬರ ಹೊಟ್ಟೆಯಲ್ಲಿದ್ದ, ಸಾಮಾನ್ಯಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಬೆಳೆದಿದ್ದ ಎರಡು ಬೃಹತ್ ಮೂತ್ರಪಿಂಡಗಳನ್ನು (ಕಿಡ್ನಿ) ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆದಿದೆ.

12 ವರ್ಷಗಳ ಕಾಯಿಲೆಯ ಹಿನ್ನೆಲೆ:

ಬಾಧಿತ ರೋಗಿಯು ಕಳೆದ 12 ವರ್ಷಗಳಿಂದ ‘ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್’ (ADPKD) ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯ ತೀವ್ರತೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಅವರ ಕಿಡ್ನಿಗಳು ಸಂಪೂರ್ಣ ವೈಫಲ್ಯ (End Stage Renal Disease) ಹೊಂದಿದ್ದವು. ಹೀಗಾಗಿ ಅವರು ನಿಯಮಿತವಾಗಿ ಹೀಮೋಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ದುರದೃಷ್ಟವಶಾತ್, ಇವರ ಕುಟುಂಬದಲ್ಲೂ ಈ ಕಾಯಿಲೆಯ ಇತಿಹಾಸವಿದ್ದು, ರೋಗಿಯ ಸಹೋದರ ಕೂಡ ಇದೇ ಕಾಯಿಲೆಯಿಂದ ಈ ಹಿಂದೆ ಮೃತಪಟ್ಟಿದ್ದರು.

ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದೇಕೆ?:

ಇತ್ತೀಚಿನ ದಿನಗಳಲ್ಲಿ ರೋಗಿಯ ಕಿಡ್ನಿಯ ಸಿಸ್ಟ್‌ಗಳಲ್ಲಿ (ಗುಳ್ಳೆಗಳು) ಪದೇ ಪದೇ ಸೋಂಕು (Infection), ತೀವ್ರ ರಕ್ತಸ್ರಾವ ಹಾಗೂ ವಿಪರೀತ ಜ್ವರ ಕಾಣಿಸಿಕೊಳ್ಳುತ್ತಿತ್ತು. ಹಲವು ಪ್ರಬಲ ಔಷಧಿಗಳನ್ನು ನೀಡಿದರೂ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ, ರೋಗಿಯ ಜೀವ ಉಳಿಸಲು ಶಸ್ತ್ರಚಿಕಿತ್ಸೆ ಮಾಡುವುದು ವೈದ್ಯರಿಗೆ ಅನಿವಾರ್ಯವಾಯಿತು.

ಸವಾಲಾಗಿದ್ದ ಶಸ್ತ್ರಚಿಕಿತ್ಸೆ ಮತ್ತು ವೈದ್ಯರ ಸಮಯಪ್ರಜ್ಞೆ:

ಮೆಡಿಕವರ್ ಆಸ್ಪತ್ರೆಯ ಯುರಾಲಜಿ ವಿಭಾಗದ ಡಾ. ದಿಲೀಪ್ ಮತ್ತು ಅವರ ತಂಡವು ಅತ್ಯಂತ ಕಷ್ಟಕರವಾಗಿದ್ದ ‘ದ್ವಿಪಕ್ಷೀಯ ನೆಫ್ರೆಕ್ಟಮಿ’ (Bilateral Nephrectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಕಾರ್ಯಾಚರಣೆಯ ವೇಳೆ ಬೃಹತ್ ಕಿಡ್ನಿಗಳನ್ನು ದೇಹದಿಂದ ಬೇರ್ಪಡಿಸಿದ ತಕ್ಷಣ ರೋಗಿಯ ರಕ್ತದೊತ್ತಡ (Blood Pressure) ತೀವ್ರವಾಗಿ ಕುಸಿತ ಕಂಡಿತು. ಆದರೆ, ಮುನ್ನೆಚ್ಚರಿಕೆಯಾಗಿ ಸಿದ್ಧತೆ ಮಾಡಿಕೊಂಡಿದ್ದ ವೈದ್ಯರ ತಂಡವು ತಕ್ಷಣವೇ ಬಹು ಪ್ರಮಾಣದ ರಕ್ತ ವರ್ಗಾವಣೆ (Blood Transfusions) ಮಾಡಿ, ಮೂರು ವಿಧದ ವಿಶೇಷ ಔಷಧಿಗಳ (Vasopressors) ನೆರವಿನಿಂದ ರೋಗಿಯ ಸ್ಥಿತಿಯನ್ನು ಯಶಸ್ವಿಯಾಗಿ ಸ್ಥಿರಗೊಳಿಸಿತು.

ಸಾಮಾನ್ಯ ಕಿಡ್ನಿಗಿಂತ ಹಲವು ಪಟ್ಟು ದೊಡ್ಡದಾಗಿದ್ದ ಮೂತ್ರಪಿಂಡಗಳು:

ದೇಹದಿಂದ ಹೊರತೆಗೆದ ಪ್ರತಿಯೊಂದು ಮೂತ್ರಪಿಂಡವು ಬರೋಬ್ಬರಿ 40 ಸೆಂಟಿಮೀಟರ್ ಉದ್ದ ಹಾಗೂ 4.5 ಕೆಜಿಗಿಂತ ಹೆಚ್ಚು ತೂಕ ಹೊಂದಿದ್ದವು. ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯನ ಕಿಡ್ನಿ ಕೇವಲ 9 ರಿಂದ 12 ಸೆಂಟಿಮೀಟರ್ ಉದ್ದ ಹಾಗೂ 125 ರಿಂದ 175 ಗ್ರಾಂ ತೂಕ ಇರುತ್ತದೆ. ಆದರೆ ಈ ರೋಗಿಯ ಕಿಡ್ನಿಗಳು ಅಸಂಖ್ಯಾತ ಸಿಸ್ಟ್‌ಗಳಿಂದ ಆವೃತ್ತವಾಗಿ, ಒಳಭಾಗದಲ್ಲಿ ತೀವ್ರ ರಕ್ತಸ್ರಾವದೊಂದಿಗೆ ಅಸಾಮಾನ್ಯವಾಗಿ ದೊಡ್ಡದಾಗಿದ್ದವು. ವೈದ್ಯರ ಈ ಸಾಹಸಿಕ ಹಾಗೂ ಯಶಸ್ವಿ ಚಿಕಿತ್ಸೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈ ಕುರಿತು ಮಾತನಾಡಿದ ಡಾ. ಮಾಧವ ದೇಸಾಯಿ ಅವರು, “ADPKD ರೋಗಿಗಳಲ್ಲಿ ಸೋಂಕು, ರಕ್ತಸ್ರಾವ ಅಥವಾ ತೀವ್ರ ನೋವಿನಂತಹ ತೊಂದರೆಗಳು ಕಾಣಿಸಿಕೊಂಡಾಗ ಸಮಯೋಚಿತ ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಜೀವ ಉಳಿಸಲು ಅತ್ಯಂತ ಮುಖ್ಯವಾಗುತ್ತದೆ. ಇಂತಹ ಅಪರೂಪದ ಹಾಗೂ ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಬಹುಶಾಖಾ ತಜ್ಞರ ಸಮನ್ವಯ ಅತ್ಯಗತ್ಯ,” ಎಂದು ಹೇಳಿದರು.

ಡಾ ದಿಲೀಪ್ ಮಾತನಾಡಿ ನನ್ನ ವೃತ್ತಿಜೀವನದಲ್ಲೆ ಈ ತರ ಪ್ರಕರಣ ಮೊದಲನೆಯದು. ಜೊತೆಗೆ ಒಬ್ಬ ವೈದ್ಯರಿಗೆ ವೃತ್ತಿ ಜೀವನಲ್ಲಿ ಒಂದು ಬಾರಿ ಮಾತ್ರ ಈ ರೀತಿಯ ಪ್ರಕರಣ ಸಿಗೋದು, ಅದನ್ನ ಮೆಡಿಕವರ್ ಆಸ್ಪತ್ರೆಯ ತಂಡ ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ತಜ್ಞ ವೈದ್ಯರ ಅನುಭವಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.


Share this with Friends

Related Post