Mon. Jun 29th, 2026

ಬೆಂಗಳೂರು ಸುತ್ತಮುತ್ತ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ: ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ

Share this with Friends

ಬೆಂಗಳೂರು:ರಾಜಧಾನಿ ಬೆಂಗಳೂರಿನಿಂದ 100 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪ್ರಮುಖ ನಗರಗಳಿಗೆ ಚತುಷ್ಪಥ (ನಾಲ್ಕು ಪಥದ) ರೈಲ್ವೆ ಮಾರ್ಗಗಳನ್ನು ನಿರ್ಮಿಸಲಾಗುವುದು. ಇದರೊಂದಿಗೆ ಬೆಂಗಳೂರಿನಿಂದ ಕರಾವಳಿ ನಗರಿ ಮಂಗಳೂರಿಗೂ ಚತುಷ್ಪಥ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಲಾಗಿರುವ ರಸ್ತೆ ಮೇಲ್ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ:

ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳ ಬೇಡಿಕೆಯನ್ನು ಕೇಂದ್ರ ಸಚಿವರ ಮುಂದೆ ಇಟ್ಟಿದ್ದರು. ಬೆಂಗಳೂರಿನಿಂದ ಮೈಸೂರು, ತುಮಕೂರು, ಕೋಲಾರ ಹಾಗೂ ಗೌರಿಬಿದನೂರು ಮಾರ್ಗವಾಗಿ ಹಿಂದೂಪುರಕ್ಕೆ ನಾಲ್ಕು ಪಥಗಳ ರೈಲು ಹಳಿ ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದ್ದರು. ಈ ಮನವಿಗಳಿಗೆ ಸಚಿವ ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ತುಮಕೂರು ಮಾರ್ಗದ ಸರ್ವೆ ಪೂರ್ಣ:

ಬೆಂಗಳೂರು-ತುಮಕೂರು ನಡುವಿನ ಚತುಷ್ಪಥ ಮಾರ್ಗದ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಒಂದೂವರೆ ಇಂದ ಎರಡು ವರ್ಷಗಳಲ್ಲಿ ಈ ಕಾಮಗಾರಿಯನ್ನು ಮುಗಿಸುವ ಗುರಿ ಹೊಂದಲಾಗಿದೆ. ಇದೇ ವೇಳೆ ಬೆಂಗಳೂರು-ಮೈಸೂರು ನಡುವಿನ ಚತುಷ್ಪಥ ಮಾರ್ಗದ ನಿರ್ಮಾಣಕ್ಕೂ ಶೀಘ್ರದಲ್ಲೇ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೋಮಣ್ಣ ವಿವರಿಸಿದರು.

ಕೋಲಾರಕ್ಕೆ ನೇರ ಸಂಪರ್ಕ, ಮಂಗಳೂರು ಆದ್ಯತೆ:

ಸಚಿವ ಎಂ.ಬಿ. ಪಾಟೀಲ್ ಅವರ ಕೋರಿಕೆಯಂತೆ ಬೆಂಗಳೂರು ಮತ್ತು ಕೋಲಾರ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಾಗುವುದು. ಸದ್ಯ ವೈಟ್‌ಫೀಲ್ಡ್ ವರೆಗೆ ಇರುವ ನಾಲ್ಕು ಪಥದ ಮಾರ್ಗವನ್ನು ಕೋಲಾರದವರೆಗೆ ವಿಸ್ತರಿಸಲಾಗುವುದು. ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಲಿದೆ.

ಇನ್ನು ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರ ಮತ್ತು ಗುಂಡ್ಯ ಮಾರ್ಗವಾಗಿ ಸಮಾನಾಂತರ ರಸ್ತೆ ಹಾಗೂ ರೈಲು ಮಾರ್ಗದ ಅಗತ್ಯತೆಯನ್ನು ಎಂ.ಬಿ. ಪಾಟೀಲ್ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಬಂದರು ನಗರಿ ಮಂಗಳೂರಿಗೆ ಚತುಷ್ಪಥ ರೈಲು ಮಾರ್ಗ ನಿರ್ಮಿಸುವುದರಿಂದ ಆರ್ಥಿಕವಾಗಿ ಹೆಚ್ಚಿನ ಪ್ರಯೋಜನಗಳಾಗಲಿದ್ದು, ಇದು ಕೂಡ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ತುಮಕೂರು-ದಾವಣಗೆರೆ ಜೋಡಿಹಳಿ ಹಾಗೂ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು: ಸಚಿವ ವಿ.ಸೋಮಣ್ಣ

ಹೊಸ ರೈಲ್ವೆ ಯೋಜನೆಗಳ ಪರಿಶೀಲನೆ:

ಸದ್ಯ ಪ್ರಗತಿಯಲ್ಲಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ. ಸದ್ಯ ಏಕಪಥವಾಗಿರುವ ಈ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ (ಡಬಲ್ ಟ್ರ್ಯಾಕ್) ಪರಿವರ್ತಿಸಬೇಕು ಎಂದು ರಾಜ್ಯ ಸಚಿವ ಎಂ.ಬಿ. ಪಾಟೀಲ್ ಅವರು ಬೇಡಿಕೆ ಇಟ್ಟಿದ್ದು, ಈ ಪ್ರಸ್ತಾವನೆಯನ್ನು ಕೂಡ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.

ವಿಶೇಷ ರೈಲಿನಲ್ಲಿ ಜಂಟಿ ಪರಿಶೀಲನೆ:

ರಾಜ್ಯದಲ್ಲಿನ ರೈಲ್ವೆ ಮೂಲಸೌಕರ್ಯ, ಸುರಕ್ಷತೆ ಹಾಗೂ ವಿವಿಧ ಯೋಜನೆಗಳ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ಸಚಿವರಾದ ವಿ.ಸೋಮಣ್ಣ ಮತ್ತು ಎಂ.ಬಿ. ಪಾಟೀಲ್ ಅವರು ವಿಶೇಷ ತಪಾಸಣಾ ವಾಹನವಾದ ಎಸ್‌ಪಿಐಸಿ (SPIC – Self-Propelled Inspection Car) ರೈಲಿನಲ್ಲಿ ಜಂಟಿಯಾಗಿ ಪ್ರಯಾಣ ಬೆಳೆಸಿದರು. ಬೆಂಗಳೂರು ರೈಲು ನಿಲ್ದಾಣದಿಂದ ಚನ್ನಪಟ್ಟಣದವರೆಗೆ ರೈಲಿನಲ್ಲಿ ಸಂಚರಿಸಿದ ಸಚಿವರು, ಈ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಇದೇ ವೇಳೆ ರಾಜ್ಯದ ರೈಲ್ವೆ ಬೇಡಿಕೆಗಳ ಅಧಿಕೃತ ಪತ್ರವನ್ನು ಎಂ.ಬಿ. ಪಾಟೀಲ್ ಅವರು ಕೇಂದ್ರ ಸಚಿವರಿಗೆ ಹಸ್ತಾಂತರಿಸಿದರು.

ವಿಜಯಪುರಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಭಾಗ್ಯ:

ಕಿತ್ತೂರು ಕರ್ನಾಟಕ ಭಾಗದ ಪ್ರಯಾಣಿಕರಿಗೆ ಸಚಿವ ಸೋಮಣ್ಣ ಸಿಹಿ ಸುದ್ದಿ ನೀಡಿದ್ದಾರೆ. ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವ ಎಂ.ಬಿ. ಪಾಟೀಲ್ ಅವರ ಮನವಿಗೆ ಸ್ಪಂದಿಸಿರುವ ಅವರು, ಮುಂಬರುವ 3 ರಿಂದ 4 ತಿಂಗಳಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಪ್ರಕಟಿಸಿದರು. ಸಾಮಾನ್ಯ ವಂದೇ ಭಾರತ್ ರೈಲಿನ ಬದಲಾಗಿ ಇಲ್ಲಿಗೆ ಸ್ಲೀಪರ್ ಆವೃತ್ತಿಯ ರೈಲನ್ನು ಓಡಿಸಲು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಜತೆಗೆ, ಸದ್ಯ ಬೆಂಗಳೂರು ಮತ್ತು ವಿಜಯಪುರ ನಡುವೆ ವಾರಕ್ಕೆ ಎರಡು ದಿನ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಸೇವೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಹಾಗೂ ಕಾಮಗಾರಿ ವೀಕ್ಷಣೆ:

ಐಟಿ ಹಬ್ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ಅನ್ನು ಜೋಡಿಸುವ ನಿಟ್ಟಿನಲ್ಲಿ ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸುವ ಪ್ರಸ್ತಾವನೆ ಸೂಕ್ತವಾಗಿದ್ದು, ಈ ಬಗ್ಗೆ ಅಗತ್ಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸೋಮಣ್ಣ ತಿಳಿಸಿದರು. ಇದಕ್ಕೂ ಮುನ್ನ ಚನ್ನಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ, ಬೆಂಗಳೂರು ಗ್ರಾಮಾಂತರದ ಕುಂಬಳಗೋಡು ಬಳಿಯ ರಾಮೋಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳಸೇತುವೆ (Underpass) ಕಾಮಗಾರಿಯನ್ನು ಉಭಯ ಸಚಿವರು ವೀಕ್ಷಿಸಿದರು. ಮಳೆಗಾಲದಲ್ಲಿ ನೀರು ನಿಲ್ಲದಂತೆ ವೈಜ್ಞಾನಿಕವಾಗಿ ಮತ್ತು ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 


Share this with Friends

Related Post