ಮುಂಬೈ: ಪೂರ್ವ ಘಟ್ಟಗಳಲ್ಲಿ ಹುಲಿಗಳ ಸಂತತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ಮಹಾರಾಷ್ಟ್ರದಿಂದ ಆಂಧ್ರಪ್ರದೇಶಕ್ಕೆ ಎರಡು ಹೆಣ್ಣು ಹುಲಿಗಳನ್ನು ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಈ ಸಂಬಂಧ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಧನ್ಯವಾದ ಸಮರ್ಪಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿಯಾದ ಬಳಿಕ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪವನ್ ಕಲ್ಯಾಣ್, “ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಅತ್ಯಂತ ಯಶಸ್ವಿ ಮಾತುಕತೆ ನಡೆದಿದೆ. ಎರಡು ರಾಜ್ಯಗಳ ಪರಸ್ಪರ ಹಿತಾಸಕ್ತಿ ಹಾಗೂ ಹೆಚ್ಚಿನ ಸಹಕಾರದ ಕುರಿತು ಚರ್ಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪೂರ್ವ ಘಟ್ಟಗಳಲ್ಲಿ ಹುಲಿ ಸಂತತಿ ಹೆಚ್ಚಳಕ್ಕೆ ಮಾಸ್ಟರ್ ಪ್ಲಾನ್:
ಆಂಧ್ರಪ್ರದೇಶಕ್ಕೆ ಎರಡು ಹೆಣ್ಣು ಹುಲಿಗಳನ್ನು ಒದಗಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ಉದಾರ ನಡೆಗೆ ಪವನ್ ಕಲ್ಯಾಣ್ ಕೃತಜ್ಞತೆ ಸಲ್ಲಿಸಿದ್ದಾರೆ. “ಈ ಪ್ರಮುಖ ನಿರ್ಧಾರವು ಪೂರ್ವ ಘಟ್ಟಗಳಲ್ಲಿ ಹುಲಿಗಳ ಸಂಖ್ಯೆಯನ್ನು ವೃದ್ಧಿಸುವ ನಮ್ಮ ಪ್ರಯತ್ನಗಳಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ. ಹೆಣ್ಣು ಹುಲಿಗಳ ಪರಿಚಯದಿಂದಾಗಿ ಇನ್‌ಬ್ರೀಡಿಂಗ್ (ಅಂತಃಸಂವರ್ಧನೆ) ಸವಾಲುಗಳನ್ನು ಜಯಿಸಲು, ತಳೀಯ ವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ಹುಲಿಗಳ ಸಂತತಿಯನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಉಳಿಸಿಕೊಳ್ಳಲು ಸಹಾಯವಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.
ವನ್ಯಜೀವಿ ಸಂರಕ್ಷಣೆಗೆ ಜಂಟಿ ಬದ್ಧತೆ:
ವಿಜ್ಞಾನ ಆಧಾರಿತ ಮತ್ತು ಸುಸ್ಥಿರ ವನ್ಯಜೀವಿ ನಿರ್ವಹಣೆಯ ಮೂಲಕ ಜೀವವೈವಿಧ್ಯತೆಯನ್ನು ರಕ್ಷಿಸುವ ಉಭಯ ರಾಜ್ಯಗಳ ಜಂಟಿ ಬದ್ಧತೆಯನ್ನು ಪವನ್ ಕಲ್ಯಾಣ್ ಶ್ಲಾಘಿಸಿದ್ದಾರೆ. ಈ ಯೋಜನೆಗೆ ನಿರಂತರ ಮಾರ್ಗದರ್ಶನ ನೀಡಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಿಗೂ ಅವರು ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ನಡುವಿನ ಈ ಪಾಲುದಾರಿಕೆಯು ವನ್ಯಜೀವಿ ಸಂರಕ್ಷಣೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

