ಬೆಂಗಳೂರು: “ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಗುಪ್ತಚರ ಇಲಾಖೆಯೇ ಹೇಳುತ್ತದೆ. ಹೀಗಿರುವಾಗ ಬೇರೆ ದೇಶದ ಅಕ್ರಮ ವಲಸಿಗರೂ ಇಲ್ಲಿ ಮತದಾರರಾಗಲು ಬಿಡಬೇಕೇ?” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ರಾಜ್ಯ ಸರ್ಕಾರಕ್ಕೆ ನೇರ ಪ್ರಶ್ನೆ ಹಾಕಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಲೋಪದೋಷಗಳು ಹಾಗೂ ಬೆಂಗಳೂರು ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಎಲ್‌ಒ ನೇಮಕಾತಿಯಲ್ಲಿ ಹಸ್ತಕ್ಷೇಪ – ಆಕ್ಷೇಪ:
ಮತದಾರರ ಪಟ್ಟಿ ಪರಿಷ್ಕರಣೆ ನಿಯಮಗಳ ಪ್ರಕಾರ ಕೇವಲ ಸರ್ಕಾರಿ ನೌಕರರನ್ನೇ ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ನೇಮಿಸಬೇಕು. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರನ್ನು ಬಿಎಲ್‌ಒಗಳನ್ನಾಗಿ ಮಾಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ್ ಆರೋಪಿಸಿದರು. ಈ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪ ಹಾಗೂ ಗೊಂದಲಗಳನ್ನು ಸೃಷ್ಟಿಸದೆ, ಕೇವಲ ಸರ್ಕಾರಿ ನೌಕರರನ್ನೇ ನೇಮಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಒತ್ತಾಯಿಸಿದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ:
ಬೆಂಗಳೂರಿನ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ ಎಂದು ದೂರಿದ ಅವರು, ಕ್ಷೇತ್ರಗಳ ನಡುವೆ ತಾರತಮ್ಯ ಎಸಗಲಾಗುತ್ತಿದೆ ಎಂದರು. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡಿ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗುತ್ತಿದೆ. ಸರ್ಕಾರ ಈ ತಾರತಮ್ಯ ನೀತಿಯನ್ನು ತಕ್ಷಣ ನಿಲ್ಲಿಸಿ ಪ್ರತಿಯೊಂದು ಕ್ಷೇತ್ರಕ್ಕೂ ಸಮಾನವಾಗಿ ಅನುದಾನ ವಿತರಿಸಬೇಕು ಎಂದು ಆಗ್ರಹಿಸಿದರು.
ತೆರಿಗೆ ಹೆಚ್ಚಳದಿಂದ ಸಾರ್ವಜನಿಕರ ಲೂಟಿ:
ರಾಜ್ಯ ಸರ್ಕಾರವು ಕಸದ ತೆರಿಗೆ, ಆಸ್ತಿ ತೆರಿಗೆ, ಜಾಹೀರಾತು ಶುಲ್ಕ, ವಿದ್ಯುತ್ ದರ ಹಾಗೂ ಜಲಮಂಡಳಿ (BWSSB) ದರಗಳನ್ನು ದುಬಾರಿಯಾಗಿ ಹೆಚ್ಚಿಸಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ತಳ್ಳಿದೆ. ಕಳ್ಳ ಮತದಾನ ತಡೆಯಲು ಮತದಾರರ ಪಟ್ಟಿ ಸ್ವಚ್ಛಗೊಳಿಸುವ ಸಮಯ ಬಂದಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ತಪ್ಪು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

