ಬೆಂಗಳೂರು: ಸಿಬಿಎಸ್‌ಇ (CBSE), ಸಿಐಎಸ್‌ಸಿಇ (CISCE) ಸೇರಿದಂತೆ ವಿವಿಧ ಹೊರ ರಾಜ್ಯ ಪರೀಕ್ಷಾ ಮಂಡಳಿಗಳ 12ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಅವಕಾಶವೊಂದನ್ನು ನೀಡಿದೆ. ಮರುಮೌಲ್ಯಮಾಪನದಲ್ಲಿ (Revaluation) ಅಂಕಗಳು ಬದಲಾಗಿರುವ ಅಭ್ಯರ್ಥಿಗಳು ತಮ್ಮ ಪರಿಷ್ಕೃತ ಅಂಕಪಟ್ಟಿಗಳನ್ನು ಸಲ್ಲಿಸಲು ಜುಲೈ 4 ರಿಂದ ಜುಲೈ 6 ರವರೆಗೆ ಕಾಲಾವಕಾಶ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು, ವಿದ್ಯಾರ್ಥಿಗಳು ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅಂಕಪಟ್ಟಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾನುವಾರವೂ ಸಹ ಕಚೇರಿಯಲ್ಲಿ ಅಂಕಪಟ್ಟಿಗಳನ್ನು ಸ್ವೀಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿರ್ಧಾರ ಬದಲಾವಣೆಗೆ ಕಾರಣ ಮತ್ತು ಪರಿಶೀಲನೆ:
ಸಾಮಾನ್ಯವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾದ ನಂತರ ಪ್ರಕಟವಾಗುವ ಮರುಮೌಲ್ಯಮಾಪನದ ಅಂಕಗಳನ್ನು ಪರಿಗಣಿಸಲು ನಿಯಮಾವಳಿಗಳಲ್ಲಿ ಅವಕಾಶವಿರುವುದಿಲ್ಲ. ಆದಾಗ್ಯೂ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಬಂದ ಸಾಲು ಸಾಲು ಮನವಿಗಳನ್ನು ಪುರಸ್ಕರಿಸಿ ಪ್ರಾಧಿಕಾರವು ಈ ವಿಶೇಷ ನಿರ್ಧಾರ ಕೈಗೊಂಡಿದೆ. ಆದರೆ, ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿಗಳನ್ನು ನೇರವಾಗಿ ಪರಿಗಣಿಸದೆ, ಅವರ ‘ಡಿಜಿಲಾಕರ್’ (DigiLocker) ಖಾತೆಯ ಮೂಲಕ ಅಂಕಗಳನ್ನು ಕಡ್ಡಾಯವಾಗಿ ಕ್ರಾಸ್-ವೆರಿಫೈ ಮಾಡಿದ ನಂತರವೇ ರ‍್ಯಾಂಕಿಂಗ್ ಬದಲಾವಣೆಗೆ ಒಳಪಡಿಸಲಾಗುವುದು ಎಂದು ಕೆಇಎ ಸ್ಪಷ್ಟಪಡಿಸಿದೆ.
ಅಂಕ ಕಡಿಮೆ ಆದವರಿಗೂ ಕೆಇಎ ಎಚ್ಚರಿಕೆ:
ಸಾಮಾನ್ಯವಾಗಿ ಮರುಮೌಲ್ಯಮಾಪನದಲ್ಲಿ ಅಂಕಗಳು ಹೆಚ್ಚಾದವರು ಮಾತ್ರ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಅಂಕಗಳು ಕಡಿಮೆಯಾದವರೂ ಸಹ ತಮ್ಮ ಪಿಯುಸಿ ಅಂಕಗಳನ್ನು ಕೆಇಎ ದಾಖಲೆಗಳಲ್ಲಿ ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು. ಒಂದು ವೇಳೆ ಅಂಕಗಳು ಕಡಿಮೆಯಾಗಿದ್ದರೂ ಅದನ್ನು ಮರೆಮಾಚಿ, ಹಳೆಯ ಅಂಕಗಳ ಆಧಾರದ ಮೇಲೆ ರ‍್ಯಾಂಕ್ ಪಡೆದರೆ, ಮುಂದೆ ಕಾಲೇಜು ಪ್ರವೇಶಾತಿಯ (Admission) ಪರಿಶೀಲನೆ ವೇಳೆ ಸೀಟು ರದ್ದಾಗುವ ಭೀತಿ ಇರುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.
ಬಿ-ಫಾರ್ಮಾ, ಫಾರ್ಮಾ-ಡಿ ಆಪ್ಷನ್ ಎಂಟ್ರಿ ಕುರಿತು ಅಪ್ಡೇಟ್:
ಇದೇ ವೇಳೆ ಫಾರ್ಮಾ-ಡಿ, ಬಿ-ಫಾರ್ಮಾ ಹಾಗೂ ಯೋಗ-ನ್ಯಾಚುರೋಪತಿ ಕೋರ್ಸ್‌ಗಳ ಆಪ್ಷನ್ ಎಂಟ್ರಿ ವಿಳಂಬದ ಕುರಿತು ವಿದ್ಯಾರ್ಥಿಗಳಲ್ಲಿ ಮೂಡಿರುವ ಆತಂಕಕ್ಕೆ ಹೆಚ್. ಪ್ರಸನ್ನ ಅವರು ತೆರೆ ಎಳೆದಿದ್ದಾರೆ. ಈ ಕೋರ್ಸ್‌ಗಳ ಅಧಿಕೃತ ಸೀಟ್ ಮ್ಯಾಟ್ರಿಕ್ಸ್ (Seat Matrix) ಇನ್ನೂ ಪ್ರಾಧಿಕಾರಕ್ಕೆ ಲಭ್ಯವಾಗಿಲ್ಲ. ಹೀಗಾಗಿ ಸದ್ಯಕ್ಕೆ ಆಪ್ಷನ್ ದಾಖಲಿಸಲು ಅವಕಾಶ ನೀಡಿಲ್ಲ. ಸೀಟ್ ಮ್ಯಾಟ್ರಿಕ್ಸ್ ಬಂದ ತಕ್ಷಣವೇ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಆಪ್ಷನ್ ಎಂಟ್ರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

