ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತಾದ ರಾಜಕೀಯ ಆರೋಪಗಳು ಮತ್ತು ಸಾರ್ವಜನಿಕರ ಆತಂಕಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಅವರು ತೆರೆ ಎಳೆದಿದ್ದಾರೆ. ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯಲು ಅಧಿಕಾರಿಗಳು ಹಾಗೂ ಮತದಾರರಿಗೆ ಅವರು ಮಹತ್ವದ ಖಡಕ್ ಸೂಚನೆಗಳನ್ನು ನೀಡಿದ್ದಾರೆ.
ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿರುವ ಈ ಮನೆ-ಮನೆ ಪರಿಶೀಲನಾ ಅಭಿಯಾನದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆಯೋಗವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಚುನಾವಣಾಧಿಕಾರಿಗಳು ನೀಡಿರುವ ಪ್ರಮುಖ ಮಾರ್ಗಸೂಚಿಗಳು:
ದಾಖಲೆಗಳ ಸಲ್ಲಿಕೆ ಕಡ್ಡಾಯವಲ್ಲ: ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರಿಂದ ಯಾವುದೇ ಗುರುತಿನ ಚೀಟಿ ಅಥವಾ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ಕೇಳುವಂತಿಲ್ಲ. ಅಧಿಕಾರಿಗಳು ಕೇವಲ ಗಣತಿ ನಮೂನೆಗಳನ್ನು (Enumeration Forms) ನೀಡಿ, ಭರ್ತಿ ಮಾಡಿದ ಫಾರ್ಮ್‌ಗಳನ್ನು ಮಾತ್ರ ಮರಳಿ ಪಡೆಯಬೇಕು.
ನೋಟಿಸ್ ನೀಡಿದ ತಕ್ಷಣ ಹೆಸರು ಡಿಲೀಟ್ ಆಗಲ್ಲ: ಪರಿಷ್ಕರಣೆ ವೇಳೆ ಲೋಪದೋಷಗಳು ಕಂಡುಬಂದಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಮತದಾರರಿಗೆ ನೋಟಿಸ್ ನೀಡುತ್ತಾರೆ. ಆದರೆ, ನೋಟಿಸ್ ನೀಡಿದ ತಕ್ಷಣ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗುವುದಿಲ್ಲ. ಇದು ಕೇವಲ ವಿವರಗಳ ದೃಢೀಕರಣ ಮತ್ತು ತಪ್ಪುಗಳನ್ನು ಸರಿಪಡಿಸಲು ನೀಡುವ ಅವಕಾಶವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಮನೆ ಲಾಕ್ ಆಗಿದ್ದರೆ ಮೂರು ಬಾರಿ ಭೇಟಿ ಕಡ್ಡಾಯ: ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಬೀಗ ಹಾಕಿದ್ದರೆ ನೇರವಾಗಿ ಹೆಸರು ತೆಗೆಯುವಂತಿಲ್ಲ. ಕನಿಷ್ಠ ಮೂರು ಬಾರಿ ಭೇಟಿ ನೀಡುವುದು ಕಡ್ಡಾಯವಾಗಿದೆ. ಫಾರ್ಮ್ ನೀಡಿದ ಮನೆಗಳಿಗೆ ‘ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್’ ಮತ್ತು ಬೀಗ ಹಾಕಿರುವ ಮನೆಗಳಿಗೆ ‘ಕೆಂಪು ಬಣ್ಣದ ವರ್ತುಲಾಕಾರದ ಸ್ಟಿಕ್ಕರ್’ ಹಚ್ಚಿ ಗುರುತು ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಆನ್‌ಲೈನ್ ಮೂಲಕವೂ ಸಲ್ಲಿಕೆಗೆ ಅವಕಾಶ: ಅಧಿಕಾರಿಗಳು ಮನೆಗೆ ಬಂದಾಗ ಲಭ್ಯವಿಲ್ಲದವರು ಅಥವಾ ವಿದೇಶದಲ್ಲಿರುವವರ ಪರವಾಗಿ ಕುಟುಂಬದ ಸದಸ್ಯರು ಸಹಿ ಮಾಡಬಹುದು. ಇಲ್ಲವೇ ಸಾರ್ವಜನಿಕರು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕ ಆನ್‌ಲೈನ್‌ನಲ್ಲೇ ನಮೂನೆಯನ್ನು ಭರ್ತಿ ಮಾಡಬಹುದು.
ಪ್ರಮುಖ ದಿನಾಂಕಗಳು:
ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಸೆಪ್ಟೆಂಬರ್ 4 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಕ್ಟೋಬರ್ 7 ರಂದು ಅಧಿಕೃತ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

