ಆನೇಕಲ್: ವಸತಿ ಬಡಾವಣೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ರೈತರ ಫಲವತ್ತಾದ ಕೃಷಿ ಜಮೀನನ್ನು ವಶಪಡಿಸಿಕೊಳ್ಳುವ ಬದಲು ಬಂಜರು ಭೂಮಿಯನ್ನು ಬಳಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಎಲ್ಲಾ ಯೋಜನೆಗಳನ್ನು ಬೆಂಗಳೂರು ಸುತ್ತಮುತ್ತಲೇ ಕೇಂದ್ರೀಕರಿಸುವ ಬದಲು ಉತ್ತರ ಕರ್ನಾಟಕ ಭಾಗಕ್ಕೆ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನ್ಯಾಯಾಲಯದಲ್ಲಿ ಈ ಹಿಂದೆಯೇ ವಜಾಗೊಂಡಿದ್ದರೂ ಸರ್ಕಾರ ಮತ್ತೆ ನೋಟಿಸ್ ನೀಡಿ ಸಣ್ಣ ರೈತರ ಜಮೀನುಗಳನ್ನು ಕಬಳಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ರೇಷ್ಮೆ ಮತ್ತು ತರಕಾರಿ ಬೆಳೆಯುವ ಜೀವಂತ ಕೃಷಿ ಭೂಮಿಯನ್ನು ನಾಶಪಡಿಸಿದರೆ ಪರಿಸರ ಮತ್ತು ಕೆರೆಗಳು ಹಾಳಾಗಲಿವೆ. ಈಗಾಗಲೇ ಐಟಿ ಕಂಪನಿಗಳು ಮತ್ತು ಕೈಗಾರಿಕೆಗಳಿಂದಾಗಿ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಹೊಸ ಯೋಜನೆಗಳಿಂದ ಒತ್ತಡ ಇನ್ನಷ್ಟು ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ ಅವರು, ಬಿಡದಿ ಮತ್ತು ಸರ್ಜಾಪುರದಲ್ಲಿ ಲೇಔಟ್‌ಗಳನ್ನು ನಿರ್ಮಿಸುತ್ತಿರುವುದು ಕೇವಲ ಕಮಿಷನ್ ದಂಧೆ ಹಾಗೂ ಹೈಕಮಾಂಡ್‌ಗೆ ಹಣ ತಲುಪಿಸುವ ಸಲುವಾಗಿ ಎಂದು ಗಂಭೀರ ಆರೋಪ ಮಾಡಿದರು. ಸರ್ಕಾರಕ್ಕೆ ರೈತರ ಹಿತಾಸಕ್ತಿ ಮುಖ್ಯವಾಗಿಲ್ಲ ಎಂದು ದೂರಿದ ಅವರು, ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯನ್ನು ಖಂಡಿಸಿದರು. ಈ ಜಮೀನು ಉಳಿಸುವ ಹೋರಾಟವನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಗಂಭೀರವಾಗಿ ಪ್ರಸ್ತಾಪಿಸುವುದಾಗಿ ಅವರು ಭರವಸೆ ನೀಡಿದರು.

