ಬೆಂಗಳೂರು: ದೇಶದ ಪ್ರತಿಷ್ಠಿತ ಹೆಚ್ಎಂಟಿ (HMT) ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ಅಡ್ಡಿಪಡಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಅರಣ್ಯ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನೆಲೆಯಲ್ಲಿ ತುರ್ತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಹೆಚ್ಎಂಟಿ ಭೂಮಿಗೆ ಸಂಬಂಧಿಸಿದ ವ್ಯಾಜ್ಯವು ಈಗಾಗಲೇ ನ್ಯಾಯಾಲಯದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು. ಇಂತಹ ಸೂಕ್ಷ್ಮ ಸಮಯದಲ್ಲಿ ರಾಜ್ಯ ಅರಣ್ಯ ಇಲಾಖೆಯು ಜಾಗ ತೆರವುಗೊಳಿಸಲು ಗಡುವು ವಿಧಿಸಿ ನೋಟಿಸ್ ನೀಡಿರುವುದು ಕಾನೂನುಬಾಹಿರವಾಗಿದ್ದು, ಇದು ನೇರವಾಗಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರು ಹೆಚ್ಎಂಟಿ ವಶದಲ್ಲಿರುವ 430 ಎಕರೆ ಜಮೀನನ್ನು ಅರಣ್ಯ ಪ್ರದೇಶವೆಂದು ಉಲ್ಲೇಖಿಸಿ, ತಕ್ಷಣವೇ ಅದನ್ನು ಬಿಟ್ಟುಕೊಡುವಂತೆ ಆದೇಶಿಸಿರುವುದು ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸಿದಂತೆ. ಇಂತಹ ಆದೇಶ ಹೊರಡಿಸಲು ಆ ಅಧಿಕಾರಿಗೆ ಯಾವುದೇ ಕಾನೂನಾತ್ಮಕ ವ್ಯಾಪ್ತಿ ಇಲ್ಲದಿರುವುದರಿಂದ, ಈ ನೋಟಿಸ್ ಅನ್ನು ಹೆಚ್ಎಂಟಿ ಸಂಸ್ಥೆಯು ನ್ಯಾಯಾಲಯದಲ್ಲೇ ಪ್ರಶ್ನಿಸಲಿದೆ ಎಂದು ಸಚಿವರು ಹೇಳಿದರು.
ಕಳೆದ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಹೆಚ್ಎಂಟಿ ಸಂಸ್ಥೆಗೆ ಹೊಸ ಮರುಜೀವ ನೀಡಲು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚಿಸಿ ವಿಶೇಷ ಪ್ಯಾಕೇಜ್ ತರಲು ತಾವೂ ಶ್ರಮಿಸುತ್ತಿರುವುದಾಗಿ ಕುಮಾರಸ್ವಾಮಿ ವಿವರಿಸಿದರು. ತಮ್ಮದೇ ಇಲಾಖೆಯ ವ್ಯಾಪ್ತಿಗೆ ಬರುವ ಈ ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಹಂತಕ್ಕೆ ಬಂದಿರುವಾಗಲೇ, ರಾಜ್ಯ ಸರ್ಕಾರವು ದುರುದ್ದೇಶದಿಂದ ಇಂತಹ ನೋಟಿಸ್ ಜಾರಿ ಮಾಡಿಸಿದೆ ಎಂದು ಅವರು ತೀವ್ರ ಆಕ್ರೋಶ ಹೊರಹಾಕಿದರು.
ಹೆಚ್ಎಂಟಿ (HMT) ಸಂಸ್ಥೆಗೆ ಸೇರಿದ ₹15,000 ಕೋಟಿಗೂ ಅಧಿಕ ಮೌಲ್ಯದ ಭೂಮಿಯ ಮೇಲೆ ಭೂಗಳ್ಳರ ಕಾಕದೃಷ್ಟಿ ಬಿದ್ದಿದೆ. ಈ ಹಿಂದೆಯೂ ಸರ್ಕಾರದ ಕೃಪಾಕಟಾಕ್ಷದಿಂದಲೇ ಹೆಚ್ಎಂಟಿಯ 175 ಎಕರೆ ಜಾಗವನ್ನು ಲೂಟಿ ಮಾಡಿ, ಅಲ್ಲಿ ದೊಡ್ಡ ಅಪಾರ್ಟ್ಮೆಂಟ್ಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆ ಸಮಯದಲ್ಲಿ ಅರಣ್ಯ ಇಲಾಖೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.
ತಾವು 2006ರಲ್ಲಿ ಮುಖ್ಯಮಂತ್ರಿಯಾಗುವವರೆಗೂ ಹೆಚ್ಎಂಟಿ ಭೂಮಿಯ ಅಕ್ರಮ ಮಾರಾಟ ಅವಿರತವಾಗಿ ನಡೆದಿತ್ತು ಎಂದು ನೆನಪಿಸಿಕೊಂಡ ಸಚಿವರು, ಅಂದು ತಾವು ಮಧ್ಯಪ್ರವೇಶಿಸಿ ಈ ಲೂಟಿಗೆ ತಡೆ ನೀಡಿದ್ದಾಗಿ ತಿಳಿಸಿದರು. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೇಳಿಕೊಳ್ಳುವವರ ಆಡಳಿತದಲ್ಲಿ ಈ ಸರ್ಕಾರಿ ಆಸ್ತಿಯನ್ನು ರಣಹದ್ದುಗಳಂತೆ ಕಿತ್ತು ತಿನ್ನಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ನೋಂದಣಿ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದ ವಿಶೇಷ ಪ್ಯಾಕೇಜ್ ಕುರಿತು ಮುಂದಿನ ವಾರವೇ ಮಹತ್ವದ ಸಭೆ ನಿಗದಿಯಾಗಿತ್ತು. ಸಂಸ್ಥೆಗೆ ಮರುಜೀವ ನೀಡುವ ಮಹತ್ವದ ನಿರ್ಧಾರ ಪ್ರಕಟವಾಗುವ ಹಂತದಲ್ಲಿದ್ದಾಗ, ನಿವೃತ್ತಿಗೆ ಕೇವಲ 15 ದಿನಗಳ ಮುಂಚೆ ಅರಣ್ಯಾಧಿಕಾರಿಯೊಬ್ಬರು ಇಂತಹ ನೋಟಿಸ್ ನೀಡುವ ಹುಂಬತನ ತೋರಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ನೋಟಿಸ್ ನೀಡಿರುವ ಈ ಅಧಿಕಾರಿಗೆ ಯಾರ ಪ್ರೇರಣೆಯಿದೆ ಎಂಬುದು ತಮಗೆ ತಿಳಿದಿದ್ದು, ಇದಕ್ಕೆ ಅವರು ಸೂಕ್ತ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನೋಟಿಸ್ ನೀಡಿರುವ ಅಧಿಕಾರಿಯ ಹಿನ್ನೆಲೆ ಹಾಗೂ ಅವರ ಹಿಂದಿರುವ ‘ಗಾಡ್ ಫಾದರ್’ಗಳ ಸಂಪೂರ್ಣ ಮಾಹಿತಿ ತಮ್ಮ ಬಳಿಯಿದ್ದು, ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸುವುದಾಗಿ ಕುಮಾರಸ್ವಾಮಿ ಗುಡುಗಿದ್ದಾರೆ
ರಿಯಲ್ ಎಸ್ಟೇಟ್ ದಂಧೆಗಾಗಿ ಹೆಚ್ಎಂಟಿ ಆಸ್ತಿಗೆ ರಾಜ್ಯ ಸರ್ಕಾರ ಕಣ್ಣು:
ರಾಜ್ಯ ಕಾಂಗ್ರೆಸ್ ಸರ್ಕಾರವು ಆಡಳಿತ ನಡೆಸುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಸಿಕೊಂಡಿದೆ.ಇದೇ ಕಾರಣಕ್ಕಾಗಿ ಹೆಚ್ಎಂಟಿ (HMT) ಸಂಸ್ಥೆಯ ಬೆಲೆಬಾಳುವ ಭೂಮಿಯ ಮೇಲೆಯೂ ಸರ್ಕಾರದ ಕೆಟ್ಟ ಕಣ್ಣು ಬಿದ್ದಿದೆ, ರಾಜ್ಯದಲ್ಲಿ ಯಾವುದೇ ಸರ್ಕಾರಿ ಸ್ವಾಮ್ಯದ ಕೈಗಾರಿಕೆ ಅಥವಾ ಕಾರ್ಖಾನೆಗಳು ಉಳಿಯಬಾರದು ಎನ್ನುವುದು ಈ ಸರ್ಕಾರದ ದುರುದ್ದೇಶವಾಗಿದೆ ಎಂದರು. ಈಗಾಗಲೇ ಎನ್ಜಿಇಎಫ್ (NGEF) ಮತ್ತು ಮೈಸೂರು ಪೇಪರ್ ಮಿಲ್ಸ್ (MPM) ನಂತಹ ಪ್ರತಿಷ್ಠಿತ ಕಾರ್ಖಾನೆಗಳನ್ನು ಮುಚ್ಚಿ ನುಂಗಿ ನೀರು ಕುಡಿಯಲಾಗಿದೆ. ಈಗ ತಾವು ಶತಪ್ರಯತ್ನ ನಡೆಸಿ ಹೆಚ್ಎಂಟಿ ಸಂಸ್ಥೆಗೆ ಮರುಜೀವ ನೀಡಲು ಮುಂದಾಗಿರುವ ಬೆನ್ನಲ್ಲೇ, ಅರಣ್ಯ ಇಲಾಖೆಯನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಜಾಗವನ್ನು ಅತಿಕ್ರಮಿಸಲು ಸರ್ಕಾರ ಸಂಚು ರೂಪಿಸಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಏನನ್ನೂ ನೀಡುತ್ತಿಲ್ಲ ಎಂದು ಪದೇಪದೇ ದೂರುವ ಇವರಿಗೆ, ಕೇಂದ್ರವೇ ಮುಂದೆ ಬಂದು ಉದ್ಯಮಗಳನ್ನು ಉಳಿಸಲು ಹೊರಟರೂ ಸಹಿಸುವ ಮನಸ್ಸಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು. ಆದರೆ, ಹೆಚ್ಎಂಟಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಈ ಬೆಳವಣಿಗೆಯಿಂದ ಆತಂಕ ಪಡಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿಯೇ ತೀರುತ್ತೇವೆ ಎಂದು ಅವರು ಭರವಸೆ ನೀಡಿದರು.
ತಾವು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಕ್ಷಣದಿಂದಲೇ ರಾಜ್ಯ ಸರ್ಕಾರವು ನಾನಾ ರೀತಿಯ ಅಡ್ಡಿಗಳನ್ನು ಉಂಟುಮಾಡುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ (KIOCL) ಶಕ್ತಿ ತುಂಬಲು ತಾವು ಯತ್ನಿಸುತ್ತಿದ್ದರೆ, ಅಲ್ಲಿಯೂ ಗಣಿಗಾರಿಕೆಗೆ ತೊಂದರೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೇ ಈ ಹಿಂದೆ ಹಣ ಪಡೆದು ಮಂಜೂರು ಮಾಡಿದ್ದ ಗಣಿಗಳಲ್ಲಿ ಈಗ ಗಣಿಗಾರಿಕೆ ನಡೆಸಲು ಬಿಡುತ್ತಿಲ್ಲ. ಇದರಿಂದಾಗಿ ಸಾವಿರಾರು ಕಾರ್ಮಿಕರು ಬೀದಿ ಪಾಲಾಗುವ ಮತ್ತು ಉಕ್ಕು ಕಂಪನಿ ಮುಳುಗುವ ಭೀತಿ ಎದುರಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ನೆರೆರಾಜ್ಯಗಳ ಅಭಿವೃದ್ಧಿ ಮಾದರಿ ನೋಡಿ ಕಲಿಯಿರಿ: ದೇಶದ ಹೆಮ್ಮೆಯ ಉದ್ಯಮವಾಗಿರುವ ಹೆಚ್ಎಂಟಿ (HMT) ಸಂಸ್ಥೆಯನ್ನು ಉಳಿಸಲು ಪ್ರಯತ್ನಿಸುವ ಬದಲು, ಅದರ ಅವಸಾನಕ್ಕೆ ರಾಜ್ಯ ಸರ್ಕಾರವೇ ಕಾರಣವಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ಹೆಚ್ಎಂಟಿ, ಕೇರಳದ ಕಾಲಮಸ್ಸೆರಿ, ತೆಲಂಗಾಣದ ಹೈದರಾಬಾದ್ ಹಾಗೂ ಹರಿಯಾಣದ ಪಿಂಜೋರಾದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಪ್ರಸ್ತುತ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ, ಬಾಹ್ಯಾಕಾಶ, ರಕ್ಷಣೆ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಬೇಕಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇದು ಇಂದಿಗೂ ಪೂರೈಸುತ್ತಿದೆ. ವಿದೇಶಗಳಲ್ಲಿ ಹೆಚ್ಎಂಟಿ ಯಂತ್ರಗಳಿಗೆ ಹಾಗೂ ಸಾರ್ವಜನಿಕರಲ್ಲಿ ಹೆಚ್ಎಂಟಿ ವಾಚ್ಗಳಿಗೆ ಇಂದಿಗೂ ಭಾರಿ ಬೇಡಿಕೆಯಿದೆ. ಇಂತಹ ಇತಿಹಾಸವಿರುವ ಕೈಗಾರಿಕೆಯನ್ನು ರಕ್ಷಿಸುವ ಬದಲು ರಾಜ್ಯ ಸರ್ಕಾರ ಉದಾಸೀನತೆ ತೋರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಉದ್ಯಮಗಳನ್ನು ಆಕರ್ಷಿಸುವಲ್ಲಿ ನೆರೆಯ ರಾಜ್ಯಗಳಿಂದ ಕಲಿಯುವುದು ಬಹಳಷ್ಟಿದೆ ಎಂದ ಸಚಿವರು, ಆಂಧ್ರಪ್ರದೇಶದ ಉದಾಹರಣೆ ನೀಡಿದರು. ಅಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ರಾಜ್ಯದ ಪ್ರಗತಿಯ ವಿಷಯ ಬಂದಾಗ ನಾಯಕರೆಲ್ಲರೂ ಒಂದಾಗುತ್ತಾರೆ. ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಕೊಡಿಸಲು ಅಲ್ಲಿನ ಮುಖ್ಯಮಂತ್ರಿಗಳು ಪಟ್ಟ ಶ್ರಮ ತಮಗೆ ತಿಳಿದಿದೆ. ಆ ಪ್ಯಾಕೇಜ್ ಘೋಷಣೆಯಾದಾಗ ಅಲ್ಲಿನ ಜನ ತಮಗೆ ಹಾಲಿನ ಅಭಿಷೇಕ ಮಾಡಿ ಗೌರವಿಸಿದ್ದರು. ಕರ್ನಾಟಕ ಸರ್ಕಾರ ತಮಗೆ ಅಭಿಷೇಕ ಮಾಡುವುದು ಬೇಡ, ಕೇವಲ ಕೆಲಸ ಮಾಡಲು ಬಿಟ್ಟರೆ ಸಾಕು ಎಂದು ಅವರು ಮಾರ್ಮಿಕವಾಗಿ ನುಡಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ, ಅಲ್ಲಿನ ಮುಖ್ಯಮಂತ್ರಿಗಳು ತಮ್ಮನ್ನು ಹಲವು ಬಾರಿ ಭೇಟಿಯಾಗಿ ಹೆಚ್ಚಿನ ಎಲೆಕ್ಟ್ರಿಕ್ ಬಸ್ಗಳನ್ನು ಹಾಗೂ ಆಂಧ್ರಪ್ರದೇಶಕ್ಕೆ ನೀಡಿದ ಮಾದರಿಯಲ್ಲೇ ಬೃಹತ್ ಉಕ್ಕು ಸ್ಥಾವರವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ನೆನಪಿಸಿದರು. ಆಂಧ್ರಪ್ರದೇಶದ ಅನಕಾಪಲ್ಲಿಯಲ್ಲಿ ಆರ್ಸೆಲರ್ ಮಿತ್ತಲ್ ಮತ್ತು ನಿಫಾನ್ ಸ್ಟೀಲ್ ಸಹಯೋಗದಲ್ಲಿ ಅತಿ ದೊಡ್ಡ ‘ಗ್ರೀನ್ ಸ್ಟೀಲ್’ ಕಾರ್ಖಾನೆ ಸ್ಥಾಪನೆಯಾಗುತ್ತಿದ್ದು, ಅದರ ಶಂಕುಸ್ಥಾಪನೆಗೆ ಚಂದ್ರಬಾಬು ನಾಯ್ಡು ಅವರು ತಮ್ಮನ್ನೇ ಆಹ್ವಾನಿಸಿದ್ದಾರೆ ಎಂದು ತಿಳಿಸುವ ಮೂಲಕ ಬೇರೆ ರಾಜ್ಯಗಳು ಕೈಗಾರಿಕಾ ಪ್ರಗತಿಗೆ ತೋರುತ್ತಿರುವ ಉತ್ಸಾಹವನ್ನು ರಾಜ್ಯ ಸರ್ಕಾರಕ್ಕೆ ನೆನಪಿಸಿಕೊಟ್ಟರು
ಗಿಡ ನೆಡುವ ಅಭಿಯಾನದ ಬಗ್ಗೆ ಲೇವಡಿ
ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನು ನೆರೆರಾಜ್ಯಗಳ ನಾಯಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಅಧಿಕಾರಿಗಳು ಕಲಿಯಬೇಕಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವರೇ ಈ ಹಿಂದೆ ಗಿಡ ನೆಡುವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾತನಾಡಿದ್ದರು ಎಂದು ನೆನಪಿಸಿದರು. ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಳ್ಳಲು ಹದಿನೈದು ಲಕ್ಷ ಸಸಿಗಳನ್ನು ನೆಟ್ಟಿರುವುದಾಗಿ ಭಾರಿ ಪ್ರಚಾರ ಮಾಡಿಕೊಂಡಿದ್ದಾರೆ. ಆದರೆ, ಅಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಿಡಗಳನ್ನು ವೈಜ್ಞಾನಿಕವಾಗಿ ನೆಡುವ ಬದಲು, ಭತ್ತದ ಪೈರು ನೆಟ್ಟ ಹಾಗೆ ಸಾಲುಸಾಲಾಗಿ ಒತ್ತೊತ್ತಾಗಿ ನೆಡಲಾಗಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಅರಣ್ಯ ಮತ್ತು ಪರಿಸರ ಸಂರಕ್ಷಣೆ ಮಾಡುವವರ ಇಂತಹ ಹುಂಬತನದ ಕ್ರಮಗಳೇ ಇವರ ನಿಜವಾದ ಆಡಳಿತ ವೈಖರಿಗೆ ಕನ್ನಡಿಯಾಗಿದೆ ಎಂದು ಸಚಿವರು ತರಾಟೆಗೆ ಹೆಚ್ ಡಿ ಕುಮಾರಸ್ವಾಮಿ ಆರೋಪ, ಹೆಚ್ಎಂಟಿ ಕಾರ್ಖಾನೆ ಪುನಶ್ಚೇತನ, ಅರಣ್ಯ ಇಲಾಖೆ ನೋಟಿಸ್, ಕರ್ನಾಟಕ ಕಾಂಗ್ರೆಸ್ ಸರ್ಕಾರ, ಬೆಂಗಳೂರು ಭೂ ವಿವಾದ,HD Kumaraswamy HMT revival controversy, Forest department notice HMT land, Congress government vs Union Minister, Bengaluru HMT land dispute, Karnataka political updates,.

