Thu. Jul 9th, 2026

ಬಿಜೆಪಿ ಕಚೇರಿಯಲ್ಲಿ ಕದನ ವಿರಾಮ: ಮುನಿಸು ಮರೆತು ಒಂದಾದ ಸುಧಾಕರ್-ವಿಶ್ವನಾಥ್!

Share this with Friends

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನಡುವಿನ ಶೀತಲ ಸಮರಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಂಧಾನ ಸಭೆಯ ಬಳಿಕ ಉಭಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ವರಿಷ್ಠರ ಸಮ್ಮುಖದಲ್ಲಿ ಸಂಧಾನ

ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ ವಾಲ್ ನೇತೃತ್ವದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಇಬ್ಬರೂ ನಾಯಕರ ಅಸಮಾಧಾನವನ್ನು ಆಲಿಸಿ, ಮನವೊಲಿಸುವಲ್ಲಿ ವರಿಷ್ಠರು ಯಶಸ್ವಿಯಾಗಿದ್ದಾರೆ. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಸುಧಾಕರ್, “ಪಕ್ಷದ ಸಂಘಟನೆ ಮತ್ತು ಹಿತದೃಷ್ಟಿಯೇ ನಮಗೆ ಮೊದಲ ಆದ್ಯತೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೊಟ್ಟೆಗೆ ಹಾಕಿಕೊಂಡು, ಮುಂಬರುವ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ದೂರು-ಪ್ರತಿದೂರುಗಳಿಗೆ ಬ್ರೇಕ್

“ನಾನು ಉಸ್ತುವಾರಿಗಳ ಮುಂದೆ ಯಾವುದೇ ವೈಯಕ್ತಿಕ ಬೇಡಿಕೆಗಳನ್ನು ಇಟ್ಟಿಲ್ಲ ಮತ್ತು ಯಾರ ವಿರುದ್ಧವೂ ದೂರು ನೀಡಿಲ್ಲ. ಆಂತರಿಕ ಭಿನ್ನಾಭಿಪ್ರಾಯಗಳನ್ನು ನಾವು ಹೊಟ್ಟೆಯಲ್ಲಿಟ್ಟುಕೊಂಡು ಸಂಘಟನೆಯತ್ತ ಗಮನ ಹರಿಸಲಿದ್ದೇವೆ. ವೈಯಕ್ತಿಕ ವಿಚಾರಗಳೇನಿದ್ದರೂ ಹೊಟ್ಟೆಗೆ ಹಾಕಿಕೊಳ್ಳುತ್ತೇವೆ. ‘ಹೊಟ್ಟೆ ಹುಣ್ಣಾದರೆ ಮಜ್ಜಿಗೆ ಕುಡಿದರೆ ಆಯಿತು’ ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ಭಿನ್ನಾಭಿಪ್ರಾಯಗಳಿಗೆ ಸಂಪೂರ್ಣ ತೆರೆ ಎಳೆದಿದ್ದಾರೆ.

ಯಲಹಂಕದ ಸ್ಥಳೀಯ ರಾಜಕೀಯ ವಿದ್ಯಮಾನ ಹಾಗೂ ಕೆಂಪೇಗೌಡ ಜಯಂತಿ ಕಾರ್ಯಕ್ರಮಗಳ ವಿಚಾರವಾಗಿ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಸದ್ಯ ಹಿರಿಯರ ಹಸ್ತಕ್ಷೇಪದಿಂದಾಗಿ ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ವಿವಾದಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.

ಸಂಧಾನ ಸಭೆಯ ಬಳಿಕ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದೇನು?

ಸಂಸದ ಡಾ. ಕೆ. ಸುಧಾಕರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಕುರಿತು ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಂಧಾನ ಸಭೆಯ ನಂತರ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾಧ್ಯಮಗಳಿಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ ಇಬ್ಬರ ನಡುವಿನ ಗೊಂದಲಗಳಿಗೆ ತೆರೆ ಬಿದ್ದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂಘಟನೆಗೆ ಮೊದಲ ಆದ್ಯತೆ

 “ಒಂದೇ ಪಕ್ಷದಲ್ಲಿ ಕೆಲಸ ಮಾಡುವಾಗ ನಾಯಕರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಆದರೆ ಪಕ್ಷದ ಶಿಸ್ತು ಮತ್ತು ಸಂಘಟನೆ ನಮಗೆ ಎಲ್ಲಕ್ಕಿಂತ ದೊಡ್ಡದು. ರಾಜ್ಯ ಬಿಜೆಪಿ ಉಸ್ತುವಾರಿಗಳು ಹಾಗೂ ಹಿರಿಯ ನಾಯಕರು ನಮ್ಮಿಬ್ಬರನ್ನೂ ಕರೆಸಿ ಮಾತನಾಡಿದ್ದಾರೆ. ಅವರ ಮಾರ್ಗದರ್ಶನದಂತೆ ಎಲ್ಲಾ ಒಳಜಗಳಗಳನ್ನು ಇಲ್ಲಗೇ ಕೈಬಿಟ್ಟು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ” ಎಂದರು.

ಒಗ್ಗಟ್ಟಿನಿಂದ ಮುನ್ನಡೆಯಲು ತೀರ್ಮಾನ

“ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಲಿದ್ದೇವೆ. ನಮ್ಮ ನಡುವೆ ಈಗ ಯಾವುದೇ ವೈಯಕ್ತಿಕ ಮುನಿಸುಗಳಿಲ್ಲ. ಹಿರಿಯರ ಕಿವಿಮಾತಿಗೆ ಗೌರವ ನೀಡಿ, ಪರಸ್ಪರ ಸಮನ್ವಯತೆಯಿಂದ ಮುನ್ನಡೆಯಲಿದ್ದೇವೆ” ಎಂದು ಹೇಳುವ ಮೂಲಕ ವಿಶ್ವನಾಥ್ ಅವರು ವಿವಾದಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.


Share this with Friends

Related Post