Thu. Jul 9th, 2026

ಫುಟ್‌ಪಾತ್ ಒತ್ತುವರಿ ತೆರವು ನಿರಂತರ, ಯಾವುದೇ ರಾಜಿ ಇಲ್ಲ: ಸಚಿವ ಕೃಷ್ಣ ಬೈರೇಗೌಡ

Share this with Friends

ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತಗೊಳಿಸುವ ಸರ್ಕಾರದ ಕಾರ್ಯಾಚರಣೆ ತೀವ್ರಗೊಂಡಿದೆ. ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಮಾತನಾಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಒತ್ತುವರಿ ತೆರವು ಪ್ರಕ್ರಿಯೆಯಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

430 ಕಿ.ಮೀ ತೆರವು: ಕಾರ್ಯಾಚರಣೆ ನಿರಂತರ

ನಗರದಲ್ಲಿ ಇದುವರೆಗೆ ಸುಮಾರು 430 ಕಿಲೋಮೀಟರ್‌ನಷ್ಟು ಪಾದಚಾರಿ ಮಾರ್ಗದ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಈ ಪ್ರಕ್ರಿಯೆಯು ಮುಂದೆಯೂ ಹಂತ-ಹಂತವಾಗಿ ಮುಂದುವರಿಯಲಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಓಡಾಟಕ್ಕೆ ಮಾತ್ರ ಮೀಸಲಿಡಲು ಸರ್ಕಾರ ಬದ್ಧವಾಗಿದೆ. ಕೇವಲ ವ್ಯಾಪಾರಿಗಳಷ್ಟೇ ಅಲ್ಲದೆ ಶಾಪ್‌ಗಳು, ಪೆಟ್ಟಿ ಅಂಗಡಿಗಳು, ರ್ಯಾಂಪ್‌ಗಳು, ಅಕ್ರಮ ಶೆಡ್‌ಗಳು ಹಾಗೂ ಜಾಹೀರಾತು ಫಲಕಗಳನ್ನು ಸಹ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ವ್ಯಾಪಾರಕ್ಕೆ ವಾರ್ಡ್ ರಸ್ತೆಗಳ ಪರ್ಯಾಯ ಅವಕಾಶ

ಬಡವರ ಹಾಗೂ ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ. ಬೆಂಗಳೂರಿನ ಒಟ್ಟು ರಸ್ತೆಗಳ ಪೈಕಿ ಕೇವಲ 1,500 ಕಿ.ಮೀ ಮುಖ್ಯ ರಸ್ತೆಗಳಲ್ಲಿ ಮಾತ್ರ ವ್ಯಾಪಾರಕ್ಕೆ ನಿರ್ಬಂಧ ಇರಲಿದೆ. ಉಳಿದ ಶೇಕಡಾ 80 ರಿಂದ 90 ರಷ್ಟು ವಾರ್ಡ್ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ಮುಕ್ತ ಅವಕಾಶವಿದ್ದು, ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಂಪೂರ್ಣ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ತ್ವರಿತವಾಗಿ ಹೊಸ ಐಡಿ ಕಾರ್ಡ್ ವಿತರಣೆ

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಹೊಸ ಗುರುತಿನ ಚೀಟಿಗಳನ್ನು (ID Cards) ವಿತರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿರುವ ಅಕ್ರಮ ಪಾರ್ಕಿಂಗ್ ಹಾಗೂ ಖಾಸಗಿ ಗಾರ್ಡನ್‌ಗಳ ಅಡೆತಡೆಗಳನ್ನೂ ಸಹ ಹಂತ-ಹಂತವಾಗಿ ತೆರವುಗೊಳಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಈ ಉನ್ನತ ಮಟ್ಟದ ಸಭೆಯಲ್ಲಿ ಮಾಜಿ ರಾಜ್ಯಸಭಾ ಸಂಸದ ರಾಜೀವ್ ಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕಾನೂನು ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಪಾಟೀಲ್ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 


Share this with Friends

Related Post