Thu. Jul 9th, 2026

ಬೆಂಗಳೂರು ಬೆನ್ನಲ್ಲೇ ಶಿವಮೊಗ್ಗದಲ್ಲೂ ಫುಟ್‌ಪಾತ್ ಕ್ಲೀನ್ ಡ್ರೈವ್: ಅಕ್ರಮ ಒತ್ತುವರಿಗಳಿಗೆ ಪಾಲಿಕೆ ಬ್ರೇಕ್!

Share this with Friends

ಶಿವಮೊಗ್ಗ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಕಡಕ್ ಸೂಚನೆ ನೀಡಿದ ಬೆನ್ನಲ್ಲೇ, ಇದೀಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಬಿಗಿ ಕಾರ್ಯಾಚರಣೆ ಶುರುವಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಅಕ್ರಮ ಅಂಗಡಿ ಮುಂಗಟ್ಟು ಹಾಗೂ ಶೋರೂಂಗಳ ಒತ್ತುವರಿಗಳ ವಿರುದ್ಧ ಶಿವಮೊಗ್ಗ ಮಹಾನಗರ ಪಾಲಿಕೆ ಗದಾಪ್ರಹಾರ ಆರಂಭಿಸಿದೆ.

ಶಂಕರ ಮಠ ರಸ್ತೆಯಲ್ಲಿ ಜಂಟಿ ಕಾರ್ಯಾಚರಣೆ

ದಿನಾಂಕ 09-07-2026 ರಂದು ನಗರದ ಪ್ರಮುಖ ಆಯಕಟ್ಟಿನ ಪ್ರದೇಶವಾದ ಶಂಕರ ಮಠ ವೃತ್ತದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟುಮಾಡುತ್ತಿದ್ದ ವಿವಿಧ ವಾಹನ ಶೋರೂಂಗಳು, ಕಾರು ಡೆಕೋರೇಟರ್ಸ್ ಹಾಗೂ ಅಂಗಡಿಗಳ ಮಾಲೀಕರು ಅಳವಡಿಸಿದ್ದ ಬೃಹತ್ ಜಾಹೀರಾತು ಫಲಕಗಳು, ಕಬ್ಬಿಣದ ಶೀಟ್‌ಗಳು ಮತ್ತು ಇತರ ವಾಣಿಜ್ಯ ವಸ್ತುಗಳನ್ನು ಮಹಾನಗ ಪಾಲಿಕೆ ಸಿಬ್ಬಂದಿ ಯಶಸ್ವಿಯಾಗಿ ಜಪ್ತಿ ಮಾಡಿ ತೆರವುಗೊಳಿಸಿದರು. ಈ ಕಾರ್ಯಾಚರಣೆಗೆ ಪ್ರಾದೇಶಿಕ ಸಾರಿಗೆ ಇಲಾಖೆಯ (RTO) ಅಧಿಕಾರಿ ಶ್ರೀ ಮಲ್ಲೇಶಪ್ಪ ಅವರು ಸಾಥ್ ನೀಡಿದ್ದರು.

ಮರು ಒತ್ತುವರಿ ಮಾಡಿದರೆ ಬೀಳಲಿದೆ ಕಾನೂನು ಪೆಟ್ಟು

ಬೆಂಗಳೂರು ಮಾದರಿಯಲ್ಲೇ ಶಿವಮೊಗ್ಗದಲ್ಲೂ ಫುಟ್‌ಪಾತ್‌ಗಳನ್ನು ಕೇವಲ ಪಾದಚಾರಿಗಳ ಓಡಾಟಕ್ಕೆ ಮಾತ್ರ ಸೀಮಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯಾಚರಣೆ ವೇಳೆ ಸಂಬಂಧಪಟ್ಟ ಎಲ್ಲಾ ಶೋರೂಂ ಹಾಗೂ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಕಠಿಣ ವಾರ್ನಿಂಗ್ ನೀಡಿದ್ದಾರೆ. ನಿಯಮ ಉಲ್ಲಂಘಿಸಿ ಮತ್ತೆ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಲು ಮುಂದಾದರೆ, ಯಾವುದೇ ಮುಲಾಜಿಲ್ಲದೆ ಕಾನೂನುಬದ್ಧ ಕ್ರಮ ಜರುಗಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಲಾಗಿದೆ.

 

 


Share this with Friends

Related Post