Thu. Jul 9th, 2026

ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ:ವಾಟಾಳ್ ನಾಗರಾಜ್ ಬಂಧನ!

Share this with Friends

ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಪರವಾಗಿ ರಸ್ತೆಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಬಲವಂತವಾಗಿ ಎತ್ತೊಯ್ದು ವಶಕ್ಕೆ ಪಡೆದಿದ್ದಾರೆ.

ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯಬೇಡಿ

ಪ್ರತಿಭಟನೆಯ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಅಭಿವೃದ್ಧಿ ಹಾಗೂ ಸುಗಮ ಸಂಚಾರದ ಹೆಸರಿನಲ್ಲಿ ದಶಕಗಳಿಂದ ಇದೇ ವ್ಯಾಪಾರ ನಂಬಿ ಬದುಕುತ್ತಿರುವ ಬಡ ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. “ಯಾವುದೇ ಪರ್ಯಾಯ ಜಾಗ ಅಥವಾ ಸೂಕ್ತ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಅಂಗಡಿಗಳನ್ನು ಒಡೆದು ಹಾಕುತ್ತಿರುವುದು ಅಮಾನವೀಯ. ಸರ್ಕಾರ ತಕ್ಷಣವೇ ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು” ಎಂದು ಅವರು ಒತ್ತಾಯಿಸಿದರು.

ಹೈಡ್ರಾಮಾ ಸೃಷ್ಟಿಸಿದ ಪೊಲೀಸರ ನಡೆ

ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ಹೋರಾಟ ಮುಂದುವರಿಸಲು ಪಟ್ಟು ಹಿಡಿದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಾಹನಕ್ಕೆ ಎತ್ತಿ ಹಾಕಿಕೊಂಡು ಹೋದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಹಾಗೂ ಹೈಡ್ರಾಮಾ ಸೃಷ್ಟಿಯಾಗಿತ್ತು. ಸರ್ಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಹಲವು ಕಿಲೋಮೀಟರ್ ವ್ಯಾಪ್ತಿಯ ಫುಟ್‌ಪಾತ್‌ಗಳನ್ನು ಮುಕ್ತಗೊಳಿಸಲಾಗುತ್ತಿದ್ದು, ಇದಕ್ಕೆ ವ್ಯಾಪಾರಿ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ.

 

 


Share this with Friends

Related Post