Thu. Jul 9th, 2026

ಅನ್ನದಾತನ ರಕ್ಷಣೆ ಸರ್ಕಾರದ ಪ್ರಥಮ ಆದ್ಯತೆ: ಮಳೆ ಹಾಗೂ ಕೃಷಿ ಬಿಕ್ಕಟ್ಟಿನ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ!

Share this with Friends

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಪ್ರಸ್ತುತ ಹವಾಮಾನ ವೈಪರೀತ್ಯ, ಮಳೆಯ ಅನಿಶ್ಚಿತತೆ ಹಾಗೂ ಕೃಷಿ ವಲಯದ ಸವಾಲುಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನ್ನದಾತರ ಪರವಾಗಿ ಗಟ್ಟಿಯಾದ ನಿಲುವು ಪ್ರಕಟಿಸಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರನ್ನು ಎಲ್ಲಾ ರೀತಿಯ ಸಂಕಷ್ಟಗಳಿಂದ ಪಾರು ಮಾಡಿ ಬದುಕಿಸುವುದು ಯಾವುದೇ ಜನಪರ ಸರ್ಕಾರದ ಮೊದಲ ಮತ್ತು ಪರಮ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯ ಸ್ಥಿತಿಗತಿ ಹಾಗೂ ಬಿತ್ತನೆ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ, “ರೈತರು ನೆಮ್ಮದಿಯಿಂದ ಇದ್ದರೆ ಮಾತ್ರ ಇಡೀ ರಾಜ್ಯ ಸುಭಿಕ್ಷವಾಗಿರಲು ಸಾಧ್ಯ. ಮಳೆಯ ಏರುಪೇರಿನಿಂದಾಗಿ ಸಂಕಷ್ಟಕ್ಕೆ ಸಿಲುಕುವ ಕೃಷಿಕರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಅಗತ್ಯ ಆರ್ಥಿಕ ನೆರವು ಸಿಗುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರು ಧೃತಿಗೆಡಬಾರದು, ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ” ಎಂದು ಭರವಸೆ ನೀಡಿದರು.

ನಷ್ಟದ ಭೀತಿಯಲ್ಲಿರುವ ಅನ್ನದಾತನಿಗೆ ಆಸರೆ

ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದಾಗಿ ರೈತರು ಅನುಭವಿಸುತ್ತಿರುವ ಬೆಳೆ ನಷ್ಟದ ಕುರಿತು ಪ್ರಸ್ತಾಪಿಸಿದ ಅವರು, ವಿಮಾ ಕಂಪನಿಗಳಿಂದ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಲು ಮತ್ತು ಸರ್ಕಾರದ ವತಿಯಿಂದ ಸಿಗಬೇಕಾದ ಸೌಲಭ್ಯಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ತಲುಪಿಸಲು ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ ಎಂದರು. ಕೃಷಿ ಇಲಾಖೆಯ ಅಧಿಕಾರಿಗಳು ಕಚೇರಿಗಳಲ್ಲೇ ಕೂರದೆ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರು ಪೂರೈಕೆ; ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ. ಅನುದಾನ: 

“ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ”. ಕಿತ್ತೂರು ಕರ್ನಾಟಕ ಭಾಗದಲ್ಲಿ ಸ್ವಲ್ಪ ಮಳೆಯಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಭೀಕರ ಬರಗಾಲದ ಎಚ್ಚರಿಕೆ ರವಾನಿಸಿದ್ದು, ನಮ್ಮಲ್ಲೂ ವಾಡಿಕೆ ಮಳೆ ಆಗಿಲ್ಲ”.”ಬರಗಾಲ ಪರಿಸ್ಥಿತಿಯಲ್ಲಿ ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇವೆ. ಸುಮಾರು 50ಕ್ಕೂ ಹೆಚ್ಚು ಶಾಸಕರು, ಸಂಸದರು ಅನೇಕ ಸಲಹೆ ನೀಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಮ್ಮ ಸರ್ಕಾರ ಉಪಆಯುಕ್ತರಿಗೆ ಅನುದಾನ ನೀಡಿದೆ. ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ ನಮ್ಮ ಸರ್ಕಾರ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ತೀರ್ಮಾನ ಮಾಡಲಾಗಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಅಧ್ಯಯನ ಮಾಡಿ ಯೋಜನೆ ರೂಪಿಸಬೇಕು. ಮುಂದಿನ ದಿನಗಳಲ್ಲಿ ನೀರಾವರಿಗೆ ನೀರು ಲಭ್ಯವಾಗುತ್ತದೆಯೋ ಇಲ್ಲವೋ, ಕುಡಿಯುವ ನೀರಿನ ಪೂರೈಕೆಗೆ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲು ಸೂಚಿಸಲಾಗಿದೆ” ಎಂದು ತಿಳಿಸಿದರು.

ರಸಗೊಬ್ಬರ ದಾಸ್ತಾನಿಗೆ ಅಧಿಕಾರಿಗಳಿಗೆ ಸೂಚನೆ:

ರಸಗೊಬ್ಬರ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ ಮಾಡಲಾಗುವುದು. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಕೇಂದ್ರ ಸರ್ಕಾರ ಕೇವಲ 50% ಗೊಬ್ಬರ ಪೂರೈಕೆ ಮಾಡಿದ್ದು, ರಸಗೊಬ್ಬರ ದಾಸ್ತಾನಿಗೆ ಸೂಚಿಸಲಾಗಿದೆ. ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ಅರಣ್ಯ ಇಲಾಖೆಯಿಂದ ಅಡ್ಡಿಯಾಗುತ್ತಿದೆ ಎಂಬ ಅಹವಾಲು ಕೇಳಿಬಂದವು. 60 ಕ್ಕೂ ಹೆಚ್ಚು ಜಾಗಗಳಲ್ಲಿ ಪೈಪ್ ಲೈನ್ ಎಳೆಯಲು ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ನೀಡಬಾರದು ಎಂದು ಸೂಚಿಸಿದ್ದೇನೆ” ಎಂದು ಮಾಹಿತಿ ನೀಡಿದರು.

“ಅರಣ್ಯ ಹಕ್ಕು ವಿಚಾರವಾಗಿ ಯಾರನ್ನೂ ಒಕ್ಕಲೆಬ್ಬಿಸಬಾರದು. ಕಾನೂನು ಚೌಕಟ್ಟಿನಲ್ಲಿ, ಅವರಿಗೆ ಸಿಗಬೇಕಾದ ಹಕ್ಕು ನೀಡಬೇಕು. ತಲತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿರುವವರನ್ನು ರಕ್ಷಣೆ ಮಾಡುವುದು ನಮ್ಮ ಸಂಕಲ್ಪ” ಎಂದು ತಿಳಿಸಿದರು.

ರಾಜ್ಯದ ಮುಜರಾಯಿ ದೇವಾಲಯಗಳ ಹುಂಡಿ ರಕ್ಷಣೆಗೆ ಸಿಸಿಟಿವಿ:

“ರಾಮ ಮಂದಿರ ವಿಚಾರದಲ್ಲಿ ನಡೆದಿರುವ ಅಕ್ರಮ ಭಕ್ತರಿಗೆ ಅಗೌರವ ತಂದಿದೆ. ಜನರು ಭಕ್ತಿಯಿಂದ ದೇಣಿಗೆ ನೀಡಿದ್ದು, ಧರ್ಮದ ಹೆಸರಿನಲ್ಲಿ ಲೂಟಿ ಮಾಡಲಾಗಿದೆ. ಹೀಗಾಗಿ ನಮ್ಮ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಕಡ್ಡಾಯವಾಗಿ ಹುಂಡಿಯ ಮುಂದೆ ಸಿಸಿಟಿವಿ ಅಳವಡಿಕೆಗೆ ತೀರ್ಮಾನಿಸಿದೆ. ಹುಂಡಿ, ಹಣ ತೆಗೆಯುವ ಹಾಗೂ ಅದನ್ನು ಎಣಿಸುವ ಜಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್ ಪಿ ಕಚೇರಿಗೆ, ಉಪ ಆಯುಕ್ತರ ಕಚೇರಿಗೆ ರವಾನೆಯಾಗುವ ವ್ಯವಸ್ಥೆ ಮಾಡಲಾಗುವುದು” ಎಂದು ವಿವರಿಸಿದರು.

“ಎಸ್ ಐಆರ್ ವಿಚಾರವಾಗಿ ಮಾರ್ಗದರ್ಶನ ನೀಡಲಾಗಿದೆ. ಮತದಾನದ ಹಕ್ಕು, ಬದುಕಿನ ಹಕ್ಕು. ಇದನ್ನು ಉಳಿಸಿಕೊಳ್ಳಲು ಅಗತ್ಯ ಇರುವವರಿಗೆ 10 ವರ್ಷ ವಾಸ ಇರುವವರಿಗೆ ನಿವಾಸ ದೃಢೀಕರಣ ಪತ್ರ ನೀಡಲಾಗುವುದು. 4.50 ಕೋಟಿ ಜಾತಿ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರತಿ ಬೂತ್ ನಲ್ಲಿ ಸಹಾಯ ಕೇಂದ್ರ ತೆರೆಯಲಾಗುವುದು. ಎಲ್ಲರ ಮತದಾನದ ಹಕ್ಕು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ನಿಲ್ಲಲ್ಲ, ಅಕ್ರಮ ತಡೆಯಲು ಪರಿಶೀಲನೆ:

“ಸಿಎಜಿ ವರದಿಯಲ್ಲಿ ಗ್ಯಾರಂಟಿ ಯೋಜನೆ ದುರ್ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ನಾವು ಗ್ಯಾರಂಟಿ ಯೋಜನೆಗಳ ಪರಿಶೀಲನೆ ಮಾಡುತ್ತಿದ್ದೇವೆ. ಸತ್ತವರ ಹೆಸರಿನಲ್ಲಿ ನೂರಾರು ಕೋಟಿ ಹಣ ಪಡೆದಿದ್ದಾರೆ. ಇದನ್ನು ತಡೆಯಲು, ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಫಲಾನುಭವಿಗಳ ಮಾಹಿತಿ ಮರುಸಂಗ್ರಹ ಮಾಡಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಲಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾವು ತೀರ್ಮಾನ ಮಾಡಿದ ಯಾವುದೇ ಕಾರ್ಯಕ್ರಮ ನಿಲ್ಲಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ರೈತರ ಕೃಷಿ ವಿಮೆ ವಿಚಾರದಲ್ಲಿ ಮೋಸ ನಡೆಯುತ್ತಿದೆ ಎಂದು ಶಾಸಕರು ನಮ್ಮ ಗಮನ ಸೆಳೆದಿದ್ದಾರೆ. ಕಲಬುರ್ಗಿಯಲ್ಲಿ ನಮಗೆ ಮಾಹಿತಿ ಬಂದಿದೆ. ರೈತರಿಗೆ ಹಣ ಸಿಗುತ್ತಿದೆಯೇ ಅಥವಾ ಮಧ್ಯವರ್ತಿಗಳ ಹಾವಳಿ ಇದೆಯೇ ಎಂದು ಪರಿಶೀಲನೆ ಮಾಡಲು ಬೆಂಗಳೂರಿನಲ್ಲಿ ಸಭೆ ಮಾಡುತ್ತೇವೆ” ಎಂದು ಹೇಳಿದರು.

“ಮೋಡ ಬಿತ್ತನೆ ವಿಚಾರವನ್ನು 10ಕ್ಕೂ ಹೆಚ್ಚು ಶಾಸಕರು ಪ್ರಸ್ತಾಪಿಸಿದ್ದು, ಇತ್ತೀಚೆಗೆ ಕೆಲವು ಶಾಸಕರು ತಾವೇ ಹಣ ಹಾಕಿ ಈ ಪ್ರಯೋಗ ಮಾಡಿದ್ದು, ಇದು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ವರದಿ ತರಿಸಿಕೊಂಡು ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು” ಎಂದು ಮಾಹಿತಿ ನೀಡಿದರು.

“ಕಂದಾಯ ಇಲಾಖೆಯಿಂದ ಭೂ ದಾಖಲೆ ನೀಡುವ ಯೋಜನೆ ಮಾಡಲಾಗಿದ್ದು, ಇದು ನಮ್ಮ ಸರ್ಕಾರದ ಪ್ರಿಯವಾದ ಯೋಜನೆ. ಇಡೀ ದೇಶದಲ್ಲಿ ಎಲ್ಲರ ಆಸ್ತಿ ದಾಖಲೆಗಳನ್ನು ಸರಿಪಡಿಸಿ ಕೊಡುವ ಭೂಮಿ ಗ್ಯಾರಂಟಿಯನ್ನು ನೀಡಲು ಮುಂದಾಗಿದೆ. ಇ ಖಾತಾ ನೀಡಲು ಸರ್ಕಾರ ತೀರ್ಮಾನಿಸಿದೆ. ಇನ್ನು ಒಸಿ ಸಿಸಿ ವಿಚಾರದಲ್ಲಿ 40×60 ವಸತಿ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ. ಇದಕ್ಕೆ ಅರ್ಜಿ ಹಾಕುವ ದಿನಾಂಕ ಆಗಸ್ಟ್ 15ರ ವರೆಗೆ ವಿಸ್ತರಣೆ ಮಾಡಲಾಗಿದೆ.

ತುಂಗಭದ್ರಾ ವಿಚಾರವಾಗಿ ಐತಿಹಾಸಿಕ ತೀರ್ಮಾನ:

“ಕಳೆದ ವರ್ಷ ತುಂಗಭದ್ರಾ ಅಣೆಕಟ್ಟಿನ ಗೇಟ್ ತುಂಡರಿಸಿತ್ತು. ಆಗ ನಾವು ಒಂದೇ ವಾರದಲ್ಲಿ ಪರಿಸ್ಥಿತಿ ನಿಭಾಯಿಸಿದೆವು. ನಂತರ ನಾವು ಎಲ್ಲಾ 33 ಗೇಟ್ ಬದಲಾವಣೆ ಮಾಡಿದ್ದೇವೆ. ರೈತರನ್ನು ಬದುಕಿಸಬೇಕು. ಟಿಬಿ ಅಣೆಕಟ್ಟಿನಲ್ಲಿ ಹೂಳು ತುಂಬಿರುವುದರಿಂದ 33 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ನೀಡಲು, ಕೇಂದ್ರ ಜಲಶಕ್ತಿ ಸಚಿವರಾದ ಸಿಆರ್ ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಸಿಎಂಗಳು ಮೊದಲ ಬಾರಿಗೆ ಸಭೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ನಾವು ಪರಸ್ಪರ ಕಿತ್ತಾಟಡದೇ ರೈತರ ಬದುಕು ರಕ್ಷಣೆಗೆ ಕೇಂದ್ರದ ತಾಂತ್ರಿಕ ಸಮಿತಿ ಅಧ್ಯಯನ ಮಾಡಿ ವರದಿ ಸಲ್ಲಿಸಲಿದ್ದು, ನಂತರ ನಾವು ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡಲಾಗುವುದು. ಈ ಮಧ್ಯೆ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ” ಎಂದು ವಿವರಿಸಿದರು.

“ಈ ಮಧ್ಯೆ ಕೃಷ್ಣ, ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ತೀರ್ಮಾನಿಸಲಾಗಿದ್ದು, ಕೇಂದ್ರಕ್ಕೆ ನಮ್ಮ ಸಮ್ಮತಿ ಸೂಚಿಸಿದ್ದೇವೆ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಿ, 1 ಲಕ್ಷ ಕೋಟಿ ಯೋಜನೆ ಮಾಡಲಿದೆ. ಇದರಲ್ಲಿ 10% ರಾಜ್ಯ ಸರ್ಕಾರದ್ದಾಗಿದ್ದು, 90% ಕೇಂದ್ರ ಸರ್ಕಾರ ಭರಿಸಲಿದೆ” ಎಂದರು.

ಆಲಮಟ್ಟಿ ಜಲಾಶಯ ಹಿನ್ನೀರಿನ ಭೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಕೇಳಿದಾಗ, “ಆಲಮಟ್ಟಿ ರೈತರಿಗೆ ಪರಿಹಾರ ನೀಡಲು ಬೆಳಗಾವಿ ಅಧಿವೇಶನದಲ್ಲಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಅವರು ಇದ್ದಾಗಲೇ ಕೆಲವರಿಗೆ ಪರಿಹಾರ ವಿತರಣೆ ಆಗಿದೆ. ಹಂತ ಹಂತವಾಗಿ ಈ ಕಾರ್ಯ ನಡೆಯಲಿದೆ. ಪರಿಹಾರ ನೀಡಲು ಸುಮಾರು ₹70 ಸಾವಿರ ಕೋಟಿಯಿಂದ 1 ಲಕ್ಷ ಕೋಟಿವರೆಗೆ ಹಣ ಬೇಕಾಗುತ್ತದೆ. ಪುನರ್ ವಸತಿ ವಿಚಾರವಾಗಿ ನಾವು ಚರ್ಚೆ ಮಾಡುತ್ತಿದ್ದೇವೆ. ಕೆಲವರು ಕೋರ್ಟ್ ಮೆಟ್ಟಿಲೇರಿ, 10-12 ಕೋಟಿಗೆ ಆದೇಶ ಪಡೆದಿದ್ದರು. ಇದರ ಮರುಪರಿಶೀಲನೆ ಅರ್ಜಿ ಹಾಕಲಾಗಿದ್ದು, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜಮೀನು ಕಳೆದುಕೊಂಡವನಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.

ತುಂಗಭದ್ರಾ ಮಾದರಿಯಲ್ಲೇ ಮಹದಾಯಿ ವಿಚಾರವಾಗಿ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜೊತೆ ಒಮ್ಮತ ತೀರ್ಮಾನ ಮಾಡಬಹುದಲ್ಲವೇ ಎಂದು ಕೇಳಿದಾಗ, “ಮಹದಾಯಿ ವಿಚಾರವಾಗಿ ನಾನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಅರಣ್ಯ ಸಚಿವರನ್ನು ಅವರನ್ನು ಐದು ಭೇಟಿ ಮಾಡಿದ್ದೇನೆ. ಅವರು ಇನ್ನು ಉತ್ತರ ನೀಡಿಲ್ಲ. ಬಿಜೆಪಿ ಸ್ನೇಹಿತರು ಚುನಾವಣೆಗೂ ಮುನ್ನ ಸಂಭ್ರಮಾಚರಣೆ ಮಾಡಿದ್ದರು. ನನ್ನ ಪ್ರಯತ್ನ ನಿರಂತರವಾಗಿದೆ” ಎಂದು ತಿಳಿಸಿದರು.

ಮಹಾರಾಷ್ಟ್ರ ಸರ್ಕಾರ ಸಭೆ ಮಾಡಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಅಹವಾಲು ಸಲ್ಲಿಸಿದ್ದು, ನಮ್ಮ ನಾಯಕರ ಜೊತೆ ಈ ವಿಚಾರ ಚರ್ಚೆ ಮಾಡಿದ್ದೇನೆ. ಕರ್ನಾಟಕದ ಗಡಿ ಕಾಪಾಡುವ ವಿಚಾರವಾಗಿ ನಾವು ಬದ್ಧವಾಗಿದ್ದೇವೆ. ಈ ವಿಚಾರವಾಗಿ ಸಂಪೂರ್ಣ ವರದಿ ಪಡೆದು, ತೀರ್ಮಾನ ಮಾಡುವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲಾಗುವುದು. ಅವರು ಸಭೆ ಮಾಡಿದಾಕ್ಷಣ ಅಂತಿಮವಾಗುವುದಿಲ್ಲ. ಈ ಬಗ್ಗೆ ನ್ಯಾಯಾಲಯದ ಅಂಶ ಗಮನಿಸುತ್ತೇವೆ. ರಾಜ್ಯದ ಹಿತ ಕಾಯಲಾಗುವುದು” ಎಂದು ತಿಳಿಸಿದರು.

ಕರ್ನಾಟಕದಲ್ಲಿ ಸಂಗ್ರಹವಾದ ರಾಮ ಮಂದಿರ ದೇಣಿಗೆ ಹಣ ಅಯೋಧ್ಯೆ ತಲುಪಿಲ್ಲ ಎಂಬ ಅರೋಪ ಕೇಳಿ ಬಂದಿದೆ ಎಂದು ಕೇಳಿದಾಗ, “ಈ ಪ್ರಶ್ನೆಯನ್ನು ಬಿಜೆಪಿಯವರಿಗೆ ಕೇಳಬೇಕು. ನಮ್ಮ ಇಂಡಿಯಾ ಒಕ್ಕೂಟದ ಮಾಜಿ ಸಿಎಂ ಈ ವಿಚಾರ ಎತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಇದನ್ನು ಪ್ರಸ್ತಾಪ ಮಾಡಿದ್ದಾರೆ. ನಮ್ಮ ದೇವಾಲಯ ರಕ್ಷಣೆಗೆ ನಾವು ತೀರ್ಮಾನ ಮಾಡಿದ್ದೇವೆ. ಈ ಆರೋಪದ ಬಗ್ಗೆ ವರದಿ ಪಡೆದು ನಂತರ ಮಾತನಾಡುತ್ತೇನೆ” ಎಂದು ತಿಳಿಸಿದರು.


Share this with Friends

Related Post