ಬೆಂಗಳೂರು: ಆಂಧ್ರಪ್ರದೇಶದ ನರಸಾಪುರ ಮತ್ತು ಸಿಲಿಕಾನ್ ಸಿಟಿಯ ಎಸ್ಎಂವಿಟಿ ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ದಕ್ಷಿಣ ಮಧ್ಯ ರೈಲ್ವೆಯು (SCR) ಸಿಹಿ ಸುದ್ದಿ ನೀಡಿದೆ. ಈ ಎರಡು ನಗರಗಳ ನಡುವೆ ಕಾರ್ಯಾಚರಣೆ ನಡೆಸುತ್ತಿದ್ದ ಸಾಪ್ತಾಹಿಕ ವಿಶೇಷ ರೈಲು ಸೇವೆಗಳನ್ನು ಇನ್ಮುಂದೆ ಕಾಯಂಗೊಳಿಸಲಾಗಿದ್ದು, ಹೊಸ ಎಕ್ಸ್ಪ್ರೆಸ್ ರೈಲುಗಳಾಗಿ ಪರಿವರ್ತಿಸಿ ಆದೇಶ ಹೊರಡಿಸಲಾಗಿದೆ.
ಹೊಸ ರೈಲು ಸಂಖ್ಯೆಗಳು ಮತ್ತು ವೇಳಾಪಟ್ಟಿ
ರೈಲು ಸಂಖ್ಯೆ 07153/07154 ವಿಶೇಷ ರೈಲುಗಳನ್ನು ಇನ್ಮುಂದೆ ಕ್ರಮವಾಗಿ ರೈಲು ಸಂಖ್ಯೆ 17293/17294 ನರಸಾಪುರ-ಎಸ್ಎಂವಿಟಿ ಬೆಂಗಳೂರು-ನರಸಾಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಆಗಿ ಬದಲಾಯಿಸಲಾಗಿದೆ.
ರೈಲು ಸಂಖ್ಯೆ 17293 (ನರಸಾಪುರ ಟು ಬೆಂಗಳೂರು): 10-07-2026 ರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 15:50ಕ್ಕೆ ನರಸಾಪುರದಿಂದ ಹೊರಟು, ಮರುದಿನ ಬೆಳಗ್ಗೆ 09:45ಕ್ಕೆ ಬೆಂಗಳೂರಿನ ಎಸ್ಎಂವಿಟಿ ತಲುಪಲಿದೆ.
ರೈಲು ಸಂಖ್ಯೆ 17294 (ಬೆಂಗಳೂರು ಟು ನರಸಾಪುರ): 11-07-2026 ರಿಂದ ಪ್ರತಿ ಶನಿವಾರ ಬೆಳಗ್ಗೆ 11:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ನಿರ್ಗಮಿಸಿ, ಮರುದಿನ ಮುಂಜಾನೆ 05:50ಕ್ಕೆ ನರಸಾಪುರವನ್ನು ತಲುಪಲಿದೆ.
ಪ್ರಮುಖ ನಿಲ್ದಾಣಗಳು
ಈ ಎಕ್ಸ್ಪ್ರೆಸ್ ರೈಲುಗಳು ಮಾರ್ಗಮಧ್ಯೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್ಪೆಟ್ಟೈ, ಕಾಟ್ಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಕಾವಲಿ, ಒಂಗೋಲ್, ಚೀರಾಲ, ಬಾಪಟ್ಲಾ, ತೆನಾಲಿ, ವಿಜಯವಾಡ, ಗುಡಿವಾಡ, ಕೈಕಲೂರು, ಅಕಿವಿಡು, ಭೀಮಾವರಂ ಟೌನ್, ಭೀಮಾವರಂ ಜಂಕ್ಷನ್, ವೀರವಾಸರಂ ಮತ್ತು ಪಾಲಕೊಲ್ಲು ನಿಲ್ದಾಣಗಳಲ್ಲಿ ನಿಲ್ಲಲಿವೆ. ಈ ಮಹತ್ವದ ನಿರ್ಧಾರದಿಂದಾಗಿ ವಾರಾಂತ್ಯದಲ್ಲಿ ನೆರೆರಾಜ್ಯಕ್ಕೆ ತೆರಳುವ ಉದ್ಯೋಗಿಗಳಿಗೆ ಮತ್ತು ಪ್ರವಾಸಿಗರಿಗೆ ಸಾರಿಗೆ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದೆ.

