ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತ ಪ್ರಾಂತ ಪ್ರಚಾರಕರ ಮೂರು ದಿನಗಳ ಸಭೆಯು ಇಲ್ಲಿನ ಬೆಳಗಾವಿಯಲ್ಲಿ ಮುಕ್ತಾಯಗೊಂಡಿದೆ. ಸಂಘದ ಪರಮ ಪೂಜನೀಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಗೌರವಾನ್ವಿತ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ದೇಶಾದ್ಯಂತದ 226 ಪ್ರಮುಖ ಆರ್‌ಎಸ್‌ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತರಬೇತಿ ವರ್ಗಗಳ ಪರಾಮರ್ಶೆ ಮತ್ತು ಸಂಘಟನೆ ವಿಸ್ತರಣೆ:
ಮಾರ್ಚ್ 2026ರ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ಸಂಘದ ತರಬೇತಿ ವರ್ಗಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆಯಿತು. ಈ ವರ್ಷ ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಾ ವರ್ಗ ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದಿದ್ದಾರೆ. ಶಾಖಾ ನಿರ್ವಹಣೆ, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ, ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಲಾಗಿದೆ. ಇದೇ ವೇಳೆ ಸೆಪ್ಟೆಂಬರ್ ತಿಂಗಳಿನಲ್ಲಿ ಗರಿಷ್ಠ ಮಟ್ಟದಲ್ಲಿ ಶಾಖೆಗಳನ್ನು ವಿಸ್ತರಿಸುವ ಯೋಜನೆಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಶತಾಬ್ದಿ ವರ್ಷದ ಯೋಜನೆಗಳು ಮತ್ತು ಸಾಮಾಜಿಕ ಕಾರ್ಯ:
ಆರ್‌ಎಸ್‌ಎಸ್ ಶತಾಬ್ದಿ ವರ್ಷದ ಅಂಗವಾಗಿ ಈಗಾಗಲೇ ನಡೆದಿರುವ ಕಾರ್ಯಕ್ರಮಗಳ ಪರಾಮರ್ಶೆ ನಡೆಸಲಾಯಿತು ಮತ್ತು ಬಾಕಿ ಉಳಿದಿರುವ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಶತಾಬ್ದಿ ವರ್ಷದ ಅಂಗವಾಗಿ ಸಂಘದ ಸಂಪರ್ಕಕ್ಕೆ ಬಂದಿರುವ ಸಾರ್ವಜನಿಕರನ್ನು ಸಾಮಾಜಿಕ ಕಾರ್ಯಗಳು ಹಾಗೂ ‘ಪಂಚ ಪರಿವರ್ತನೆ’ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಇದರೊಂದಿಗೆ 2026-27ನೇ ಸಾಲಿನ ಸರಸಂಘಚಾಲಕರ ಪ್ರವಾಸದ ಯೋಜನೆಯನ್ನೂ ಅಂತಿಮಗೊಳಿಸಲಾಯಿತು.
ದೇಶದ ಪ್ರಚಲಿತ ವಿದ್ಯಮಾನಗಳ ಕುರಿತು ಕಳವಳ:
ಸಭೆಯಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿಯ ಹಲವು ಆಯಾಮಗಳ ಬಗ್ಗೆ ಗಂಭೀರ ಚಿಂತನೆ ನಡೆಸಲಾಯಿತು. ವಿಶೇಷವಾಗಿ ಮುಂಬರುವ ಜನಗಣತಿ ಮತ್ತು ದೇಶದಲ್ಲಿ ಉಂಟಾಗುತ್ತಿರುವ ಜನಸಂಖ್ಯಾ ಅಸಮತೋಲನದ (Demographic Imbalance) ಸವಾಲುಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ದೇಶದಲ್ಲಿ ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಹೆಚ್ಚುತ್ತಿರುವ ದುಷ್ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಂಘವು, ನಶ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆದ್ಯತೆಯ ಮೇರೆಗೆ ಕೆಲಸ ಮಾಡಲು ನಿರ್ಧರಿಸಿತು. ಅಲ್ಲದೆ, ಸಂತ ಶಿರೋಮಣಿ ರವಿದಾಸ್ ಮಹಾರಾಜ್ ಅವರ 650ನೇ ಜನ್ಮ ಜಯಂತಿ ವರ್ಷದ ಕಾರ್ಯಕ್ರಮಗಳ ಆಯೋಜನೆ ಬಗ್ಗೆಯೂ ಚರ್ಚಿಸಲಾಯಿತು.
ರಾಮಮಂದಿರ ದೇಣಿಗೆ ಅಕ್ರಮದ ಬಗ್ಗೆ ತೀವ್ರ ವಿಷಾದ:
ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆ ಎಣಿಕೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರದ ಘಟನೆಗೆ ಸಭೆಯಲ್ಲಿ ತೀವ್ರ ದುಃಖ ಮತ್ತು ವಿಷಾದ ವ್ಯಕ್ತಪಡಿಸಲಾಯಿತು. ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕೋರಿಕೆಯ ಮೇರೆಗೆ ನಡೆಯುತ್ತಿರುವ ಎಸ್‌ಐಟಿ (SIT) ಮತ್ತು ಪೊಲೀಸ್ ತನಿಖೆಯು ಶೀಘ್ರದಲ್ಲೇ ನಿರ್ಣಾಯಕ ತೀರ್ಪಿಗೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು. ಕೋಟ್ಯಂತರ ರಾಮಭಕ್ತರ ಶ್ರದ್ಧೆ ಮತ್ತು ಆಳವಾದ ನಂಬಿಕೆಗೆ ಧಕ್ಕೆ ಬಾರದಂತೆ, ಭವಿಷ್ಯದಲ್ಲಿ ಇಂತಹ ಯಾವುದೇ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ತೀರ್ಥಕ್ಷೇತ್ರ ಟ್ರಸ್ಟ್‌ಗೆ ಸಭೆಯ ಮೂಲಕ ಆಗ್ರಹಿಸಲಾಯಿತು.

