Sun. Jul 12th, 2026

ಸಕಲ ಸರ್ಕಾರಿ ಗೌರವಗಳೊಂದಿಗೆ ಗಾನಕೋಗಿಲೆ ಎಸ್‌‌. ಜಾನಕಿ ಅಂತ್ಯಸಂಸ್ಕಾರ; ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ

Share this with Friends

ಮೈಸೂರು: ಭಾರತೀಯ ಚಿತ್ರರಂಗದ ಅಪರೂಪದ ಗಾಯಕಿ, ಅಭಿಮಾನಿಗಳ ಪಾಲಿನ ‘ಜಾನಕಿ ಅಮ್ಮ’ (88) ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಸರ್ಕಾರದ ಆದೇಶದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಗಾಯಕಿ ಜಾನಕಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಮೈಸೂರಿನಲ್ಲೇ ತಮ್ಮ ಅಂತ್ಯಕ್ರಿಯೆ ನಡೆಯಬೇಕು ಎಂಬುದು ಅವರ ಕೊನೆಯ ಆಸೆಯಾಗಿತ್ತು. ಅದರಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ:

ಸಂಗೀತ ಸಾಮ್ರಾಜ್ಞಿಯ ಅಗಲಿಕೆಯಿಂದ ಆಘಾತಗೊಂಡಿರುವ ಕೋಟ್ಯಂತರ ಅಭಿಮಾನಿಗಳು ಹಾಗೂ ಗಣ್ಯರ ದರ್ಶನಕ್ಕಾಗಿ ಜಾನಕಿ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಚಿತ್ರರಂಗದ ಪ್ರಮುಖರು, ರಾಜಕಾರಣಿಗಳು ಮತ್ತು ಸಾವಿರಾರು ಸಂಗೀತಪ್ರಿಯರು ಸರತಿ ಸಾಲಿನಲ್ಲಿ ನಿಂತು ಗಾನಕೋಗಿಲೆಗೆ ಅಶ್ರುತರ್ಪಣ ಸಲ್ಲಿಸುತ್ತಿದ್ದಾರೆ.

ತೋಟದ ಮನೆಯಲ್ಲಿ ಅಂತ್ಯಕ್ರಿಯೆ:

ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನದ ಪ್ರಕ್ರಿಯೆ ಮುಗಿದ ಬಳಿಕ, ಮೃತದೇಹವನ್ನು ಮೈಸೂರು ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ತೋಟದ ಮನೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ, ಕುಶಾಲತೋಪು ಸಿಡಿಸುವ ಮೂಲಕ ಸರ್ಕಾರಿ ಸತ್ಕಾರಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.

ಮೊಮ್ಮಗಳಿಂದ ಅಗ್ನಿಸ್ಪರ್ಶ:

ಎಸ್‌‌. ಜಾನಕಿ ಅವರ ಪತಿ ರಾಮಪ್ರಸಾದ್ ಹಾಗೂ ಏಕೈಕ ಪುತ್ರ ಮುರಳಿಕೃಷ್ಣ ಇಬ್ಬರೂ ಈಗಾಗಲೇ ಮೃತಪಟ್ಟಿದ್ದಾರೆ. ಹೀಗಾಗಿ, ಸಂಪ್ರದಾಯದಂತೆ ನಡೆಯಲಿರುವ ಈ ಅಂತಿಮ ವಿಧಿವಿಧಾನಗಳನ್ನು ಜಾನಕಿ ಅವರ ಮೊಮ್ಮಗಳು ನೆರವೇರಿಸಲಿದ್ದು, ಅವರೇ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುಮಾರು ಆರು ದಶಕಗಳ ಕಾಲ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಇತಿಹಾಸ ನಿರ್ಮಿಸಿದ್ದ ಧ್ವನಿಯೊಂದು ಇಹಲೋಕ ತ್ಯಜಿಸಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

 


Share this with Friends

Related Post