ಬೆಂಗಳೂರು: “ಭಾರತೀಯ ಚಿತ್ರರಂಗದ ಅಪರೂಪದ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಹೆಸರು ಇತಿಹಾಸದಲ್ಲಿ ಅಜರಾಮರವಾಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ಚಿತ್ರರಂಗದ ಪ್ರಮುಖ ಗಣ್ಯರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ನಗರದ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಗೀತ ಸಾಮ್ರಾಜ್ಞಿಯ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಸಂಗೀತ ಲೋಕದ ಅಪರೂಪದ ಸಾಧಕಿ:
ಜಾನಕಿ ಅಮ್ಮ ಅವರ ಸಾಧನೆಯನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಅವರು ಸುಮಾರು ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಧ್ವನಿಯಾಗುವ ಮೂಲಕ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಇತಿಹಾಸ ಬರೆದಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ 33 ಬಾರಿ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಮ್ಮ ಸರ್ಕಾರವೂ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು” ಎಂದು ಅವರ ಸಾಧನೆಯನ್ನು ಕೊಂಡಾಡಿದರು.
ಕೊನೆ ಆಸೆಗೆ ಸಿಎಂ ಅಚ್ಚರಿ:
“ಜಾನಕಿ ಅಮ್ಮನವರ ಕುಟುಂಬದವರ ಜೊತೆ ನಾನು ದೂರವಾಣಿ ಮೂಲಕ ಮಾತನಾಡಿದೆ. ಹಿರಿಯ ಗಾಯಕಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅಗತ್ಯವಿದ್ದರೆ ಚೆನ್ನೈ ಅಥವಾ ಹೈದರಾಬಾದ್ಗೆ ಕರೆದೊಯ್ಯಲು ಏರ್ ಲಿಫ್ಟ್ (ವಿಶೇಷ ವಿಮಾನ) ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಇರಬೇಕು ಎಂಬುದು ಅಜ್ಜಿಯ ಕೊನೆಯ ಆಸೆಯಾಗಿತ್ತು ಎಂದು ಅವರ ಕುಟುಂಬದವರು ತಿಳಿಸಿದರು. ಈ ಮಾತು ನನಗೆ ಅಚ್ಚರಿ ಮೂಡಿಸಿತು” ಎಂದು ಸಿಎಂ ಹೇಳಿದರು.
ಲತಾ ಮಂಗೇಶ್ಕರ್ ಅವರಂತೆ ಸರಳ ಜೀವಿ:
ಜಾನಕಿ ಅವರ ಸರಳತೆಯನ್ನು ನೆನೆದ ಡಿ.ಕೆ. ಶಿವಕುಮಾರ್, “ಅವರು ಭಾರತದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರಷ್ಟೇ ಸರಳ ಜೀವನ ನಡೆಸಿದವರು. ನಮ್ಮ ಕನ್ನಡ ಭಾಷೆ, ಈ ನೆಲ ಹಾಗೂ ಮೈಸೂರಿನ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಅವರು ಚಿತ್ರರಂಗದ ತಮ್ಮ ಮೊದಲ ಹಾಗೂ ಕೊನೆಯ ಹಾಡನ್ನು ಹಾಡಿದ್ದು ಮೈಸೂರಿನಲ್ಲೇ ಎಂಬುದು ಮತ್ತೊಂದು ವಿಶೇಷ ವಿಚಾರ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ” ಎಂದರು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:
ಅವರ ಕೊನೆಯ ಇಚ್ಛೆಗೆ ಗೌರವ ನೀಡಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ನಡೆಸಲು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಲಾಗಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೈಸೂರಿನಲ್ಲಿ ಮಧ್ಯಾಹ್ನದವರೆಗೂ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಬುರ್ಗಿ ಪ್ರವಾಸದಲ್ಲಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪ್ರವಾಸ ಮೊಟಕುಗೊಳಿಸಿ ಅಂತಿಮ ವಿಧಿವಿಧಾನಗಳ ಸಂಪೂರ್ಣ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

