Sun. Jul 12th, 2026

ಬಿಎಂಟಿಸಿ ಪ್ರಯಾಣಿಕರಿಗೆ ಇನ್ನು ಮುಂದೆ ನಿಲ್ದಾಣ ತಪ್ಪಲ್ಲ, ಚಿಲ್ಲರೆ ಕಿರಿಕಿರಿ ಇರಲ್ಲ: ಘಟಕ ವ್ಯವಸ್ಥಾಪಕರಿಗೆ ಎಂಡಿ ಕಟ್ಟುನಿಟ್ಟಿನ ಆದೇಶ

Share this with Friends

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಇನ್ನಷ್ಟು ಸುರಕ್ಷಿತ, ಗುಣಮಟ್ಟದ ಹಾಗೂ ಗೌರವಯುತ ಸೇವೆ ಒದಗಿಸಲು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು (MD) ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರಿಗೆ ಸಚಿವರು ಇತ್ತೀಚೆಗೆ ಬಸ್ಸುಗಳಲ್ಲಿ ಸ್ವತಃ ಪ್ರಯಾಣಿಸಿ ಪರಿಶೀಲನೆ ನಡೆಸಿದ ಬಳಿಕ ನೀಡಿದ ಕಟ್ಟುನಿಟ್ಟಿನ ಸೂಚನೆಗಳ ಅನ್ವಯ ಈ ಹೊಸ ನಿರ್ದೇಶನಗಳನ್ನು ಜಾರಿಗೆ ತರಲಾಗಿದೆ.

ಸಂಸ್ಥೆಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಂಚಾರ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ:

1. ನಿಗದಿತ ನಿಲ್ದಾಣಗಳಲ್ಲೇ ನಿಲುಗಡೆ ಕಡ್ಡಾಯ:

ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವಾಗ ಚಾಲಕರು ಬಸ್‌ಗಳನ್ನು ನಿಗದಿತ ಬಸ್ ನಿಲ್ದಾಣಗಳಲ್ಲಿಯೇ ನಿಲ್ಲಿಸಬೇಕು. ನಿಲ್ದಾಣಗಳನ್ನು ಬಿಟ್ಟು ಮುಂದೆ ಹೋಗಿ ನಿಲ್ಲಿಸುವುದು ಅಥವಾ ನಿಲ್ಲಿಸದೆ ಹಾಗೆಯೇ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

2. ಪ್ರಯಾಣಿಕರೊಂದಿಗೆ ಗೌರವಯುತ ವರ್ತನೆ:

ಬಸ್ ಚಾಲಕರು ಮತ್ತು ನಿರ್ವಾಹಕರು (ಕಂಡಕ್ಟರ್) ಸಾರ್ವಜನಿಕರೊಂದಿಗೆ ಯಾವುದೇ ಕಾರಣಕ್ಕೂ ಉದ್ಧಟತನದಿಂದ ವರ್ತಿಸಬಾರದು. ಪ್ರತಿಯೊಬ್ಬ ಪ್ರಯಾಣಿಕರೊಂದಿಗೂ ಅತ್ಯಂತ ಸೌಜನ್ಯ ಹಾಗೂ ಗೌರವದಿಂದ ನಡೆದುಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

3. ಯುಪಿಐ (UPI) ಸ್ಕ್ಯಾನರ್ ಬಳಕೆಗೆ ಆದ್ಯತೆ:

ಬಸ್ಸುಗಳಲ್ಲಿ ಚಿಲ್ಲರೆ ಹಣದ ಸಮಸ್ಯೆಯಿಂದಾಗಿ ನಿತ್ಯ ನಡೆಯುವ ಗಲಾಟೆಗಳಿಗೆ ಬ್ರೇಕ್ ಹಾಕಲು ಹೊಸ ಕ್ರಮ ಕೈಗೊಳ್ಳಲಾಗಿದೆ. ಇಟಿಎಂ (ETM) ಯಂತ್ರಗಳಲ್ಲಿರುವ ಡೈನಾಮಿಕ್ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆನ್‌ಲೈನ್ ಯುಪಿಐ ಪಾವತಿ ಮಾಡಿಕೊಳ್ಳಲು ಪ್ರಯಾಣಿಕರಿಗೆ ತಿಳಿಸಬೇಕು. ಚಿಲ್ಲರೆ ಹಣದ ಕಾರಣ ನೀಡಿ ಯಾವುದೇ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸುವುದು ಅಥವಾ ಪ್ರಯಾಣ ನಿರಾಕರಿಸುವುದನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸಲಿದ್ದು, ಕಠಿಣ ಕ್ರಮ ಕೈಗೊಳ್ಳಲಿದೆ.

4. ಇಟಿಎಂ ಯಂತ್ರಗಳಲ್ಲಿ ನಿಲ್ದಾಣಗಳ ನವೀಕರಣ:

ಪ್ರಸ್ತುತ ಇಟಿಎಂ ಯಂತ್ರಗಳಲ್ಲಿ ಕಾಣಿಸದಿರುವ ಬಸ್ ಶೆಲ್ಟರ್‌ಗಳನ್ನು (Designated Stops) ತುರ್ತು ಆದ್ಯತೆಯ ಮೇರೆಗೆ ಗುರುತಿಸಿ ವರದಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತಹ ನಿಲ್ದಾಣಗಳನ್ನು ತಕ್ಷಣವೇ ಇಟಿಎಂ ತಂತ್ರಾಂಶದಲ್ಲಿ ಸೇರ್ಪಡೆಗೊಳಿಸಲಾಗುವುದು.

5. ಸಿಬ್ಬಂದಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ:

ಸಾರ್ವಜನಿಕರಿಂದ ಪದೇ ಪದೇ ದೂರುಗಳಿಗೆ ಒಳಗಾಗುತ್ತಿರುವ ಹಾಗೂ ಸರಿಯಾಗಿ ವರ್ತಿಸದ ಚಾಲಕ ಮತ್ತು ನಿರ್ವಾಹಕರನ್ನು ಗುರುತಿಸಿ, ಅವರಿಗೆ ವಡ್ಡರಹಳ್ಳಿಯ ತರಬೇತಿ ಕೇಂದ್ರದಲ್ಲಿ ವಿಶೇಷ ‘ಸಾಫ್ಟ್ ಸ್ಕಿಲ್ಸ್’ (ನಡವಳಿಕೆ ಮತ್ತು ಸಂವಹನ) ತರಬೇತಿ ನೀಡಲು ನಿರ್ಧರಿಸಲಾಗಿದೆ.

6. ದೈನಂದಿನ ಜಾಗೃತಿ ಕಾರ್ಯಕ್ರಮ:

ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಅಧಿಕಾರಿಗಳು ಪ್ರತಿದಿನ ಡಿಪೋಗಳಿಗೆ ಭೇಟಿ ನೀಡಿ ಸಿಬ್ಬಂದಿಗೆ ರಸ್ತೆ ಸುರಕ್ಷತೆ, ಸೌಜನ್ಯದ ವರ್ತನೆ ಮತ್ತು ಕಡ್ಡಾಯ ನಿಲುಗಡೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

7. ಉತ್ತಮ ಸೇವೆಗೆ ಪ್ರಶಂಸನಾ ಪತ್ರ:

ಯಾವ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರಿಂದ ಪ್ರಶಂಸೆ ಪಡೆದು, ಉತ್ತಮ ಸೇವೆ ಸಲ್ಲಿಸುತ್ತಾರೋ ಅಂತಹ ಮಾದರಿ ಸಿಬ್ಬಂದಿಯನ್ನು ಸಂಸ್ಥೆ ಗುರುತಿಸಲಿದೆ. ಅವರಿಗೆ ಕೇಂದ್ರ ಕಚೇರಿಯಿಂದ ಅಧಿಕೃತ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸದಾ “ಪ್ರಯಾಣಿಕರ ಸೇವೆಯೇ ನಮ್ಮ ಆದ್ಯತೆ” ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಂದ ಬರುವ ಸಲಹೆಗಳು ಹಾಗೂ ದೂರುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಸೇವಾ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಅಗತ್ಯ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

 


Share this with Friends

Related Post