Thu. Jul 16th, 2026

ಮುಜರಾಯಿ ದೇವಸ್ಥಾನಗಳ ಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್: ಸಿಸಿಟಿವಿ ಕಣ್ಗಾವಲು, ಕಂಟ್ರೋಲ್ ರೂಮ್ ಸ್ಥಾಪನೆಗೆ ಡಾ. ಜಿ. ಪರಮೇಶ್ವರ್ ಆದೇಶ!

Share this with Friends

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಆದಾಯ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಣಿಕೆ ಹುಂಡಿಗಳ ಕಳ್ಳತನ ಹಾಗೂ ಲೆಕ್ಕಪತ್ರ ದುರುಪಯೋಗವನ್ನು ತಡೆಗಟ್ಟಲು ಸರ್ಕಾರ ಭಾರಿ ಕ್ರಮಕ್ಕೆ ಮುಂದಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಜರಾಯಿ ಹಾಗೂ ಕ್ರೀಡಾ ಸಚಿವರೂ ಆದ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು, ರಾಜ್ಯದ ಪ್ರಮುಖ ದೇವಸ್ಥಾನಗಳ ಪ್ರತಿಯೊಂದು ಹುಂಡಿಯ ಮೇಲೆಯೂ ನಿಗಾ ಇಡಲು ನಾಲ್ಕು ಕಡೆಗಳಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಮತ್ತು ಕೇಂದ್ರ ಕಚೇರಿಯಿಂದಲೇ ನೇರವಾಗಿ ನಿಗಾವಹಿಸಲು ವಿಶೇಷ ನಿಯಂತ್ರಣ ಕೊಠಡಿಯನ್ನು (ಕಂಟ್ರೋಲ್ ರೂಮ್) ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಒಟ್ಟು 39 ಸಾವಿರ ದೇವಸ್ಥಾನಗಳಿದ್ದು, ಇವುಗಳಲ್ಲಿ ‘ಎ’ ವರ್ಗದ ದೇವಸ್ಥಾನಗಳಿಗೆ ಭಕ್ತರಿಂದ ಸಾಕಷ್ಟು ಆದಾಯ ಮತ್ತು ಕಾಣಿಕೆಗಳು ಬರುತ್ತಿವೆ. ಭಕ್ತರು ಅರ್ಪಿಸುವ ಪ್ರತಿ ಪೈಸೆಗೂ ಸರಿಯಾದ ಲೆಕ್ಕ ಇರಬೇಕು ಎಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆಯನ್ನು ತರಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

₹2,521 ಕೋಟಿ ಸ್ಥಿರ ಠೇವಣಿ: ದೇವಸ್ಥಾನಗಳ ಹಣ ಅನ್ಯ ಉದ್ದೇಶಕ್ಕೆ ಬಳಸಲ್ಲ

ರಾಜ್ಯದ ‘ಎ’ ವರ್ಗದ ಪ್ರಮುಖ ದೇವಸ್ಥಾನಗಳಲ್ಲಿ ಸದ್ಯ ಸುಮಾರು ₹2,521 ಕೋಟಿ ರೂಪಾಯಿಗಳಷ್ಟು ಹಣ ಸ್ಥಿರ ಠೇವಣಿಯಲ್ಲಿದೆ (ಫಿಕ್ಸ್ ಡೆಪಾಸಿಟ್) ಎಂದು ಸಚಿವರು ಮಾಹಿತಿ ನೀಡಿದರು. “ಯಾವುದೇ ಕಾರಣಕ್ಕೂ ದೇವಸ್ಥಾನಗಳ ಕಾಣಿಕೆ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದಿಲ್ಲ. ಈ ಹಣವನ್ನು ಆಯಾ ದೇವಸ್ಥಾನಗಳ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಮಾತ್ರ ಬಳಸಲಾಗುತ್ತದೆ. ಕೇವಲ ಶೇಕಡಾ 10 ರಷ್ಟು ಹಣವನ್ನು ಮಾತ್ರ ಆದಾಯವಿಲ್ಲದ ‘ಸಿ’ ವರ್ಗದ ಸಣ್ಣ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗಾಗಿ ವಿನಿಯೋಗಿಸಲಾಗುವುದು” ಎಂದು ಅವರು ಭರವಸೆ ನೀಡಿದರು. ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಬೃಹತ್ ಅಭಿವೃದ್ಧಿ ಯೋಜನೆಯನ್ನು (ಮಾಸ್ಟರ್ ಪ್ಲಾನ್) ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಹೊರರಾಜ್ಯಗಳ ಯಾತ್ರಾ ಸ್ಥಳಗಳಲ್ಲಿರುವ ಕರ್ನಾಟಕದ ಆಸ್ತಿ ಸಂರಕ್ಷಣೆ

ಕರ್ನಾಟಕದ ಹೊರಗಿರುವ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂ ರಾಜ್ಯ ಮುಜರಾಯಿ ಇಲಾಖೆಗೆ ಸೇರಿದ ಸ್ಥಿರ ಆಸ್ತಿಗಳಿದ್ದು, ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು. ತಿರುಪತಿಯಲ್ಲಿ ರಾಜ್ಯಕ್ಕೆ ಸೇರಿದ 7 ಎಕರೆ ಭೂಮಿ ಇದ್ದು, ಅಲ್ಲಿಗೆ ತೆರಳುವ ನಮ್ಮ ರಾಜ್ಯದ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ಶ್ರೀಶೈಲ, ವಾರಣಾಸಿ (ಕಾಶಿ) ಮತ್ತು ತುಳಜಾಪುರದಲ್ಲೂ ಇರುವ ಮುಜರಾಯಿ ಇಲಾಖೆಯ ಜಾಗಗಳನ್ನು ಗುರುತಿಸಿ, ಅಲ್ಲಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಸುಸಜ್ಜಿತ ವಸತಿಗೃಹ ಹಾಗೂ ಅಗತ್ಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ವಿವರಿಸಿದರು.

 

 


Share this with Friends

Related Post