ಬೆಂಗಳೂರು:ಕಳೆದ 1999 ರಿಂದ 2004ರ ಅವಧಿಯಲ್ಲಿ ಬೆಂಗಳೂರಿನ ಹೆಚ್‌ಎಂಟಿ (HMT) ಸಂಸ್ಥೆಗೆ ಸೇರಿದ ಬೊಂಬಾಟ್ ಜಾಗವನ್ನು ಅಕ್ರಮವಾಗಿ ಲೂಟಿ ಮಾಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಭೂ ಹಗರಣದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ನಗರಾಭಿವೃದ್ಧಿ ಖಾತೆಯ ಸಚಿವರ ನೇರ ಪಾತ್ರವಿದೆ ಎಂದು ಅವರು ಡಿಕೆ ಶಿವಕುಮಾರ್ ಅವರ ವಿರುದ್ಧ ಪರೋಕ್ಷ ಆರೋಪ ಮಾಡಿದ್ದರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕೈಗಾರಿಕಾ ಉದ್ದೇಶಗಳಿಗಾಗಿ ಮೀಸಲಾಗಿದ್ದ ಎಚ್‌ಎಂಟಿ ಕಂಪನಿಯ ಸುಮಾರು 175 ಎಕರೆ ಭೂಮಿಯನ್ನು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ. ಈ ಜಾಗದಲ್ಲಿ ಇಂದು ಬೃಹತ್ ಗಗನಚುಂಬಿ ಕಟ್ಟಡಗಳು ಮತ್ತು ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಈ ಅಕ್ರಮ ಲೂಟಿಯ ಕುರಿತು ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವರದಿ ಬಂದ ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಚಿವರು ಘೋಷಿಸಿದರು.
ವಿವಾದಿತ ಎಚ್‌ಎಂಟಿ ಜಾಗಕ್ಕೆ ಗುರುವಾರ ಇಡೀ ದಿನ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿದ ಕುಮಾರಸ್ವಾಮಿ ಅವರು ಪರಿಶೀಲನೆ ನಡೆಸಿದರು. ಅಕ್ರಮವಾಗಿ ನಿರ್ಮಾಣಗೊಂಡಿವೆ ಎನ್ನಲಾದ ಪ್ರಮುಖ ವಸತಿ ಸಮುಚ್ಚಯಗಳಾದ:
ಅಕ್ವಿಲಾ ಹೈಟ್ಸ್
ಗೋವಿಯನು ಎರಿಟಿಸ್
ಪ್ರೆಸ್ಟೀಜ್ ಕೆನ್ಸಿಂಗ್ಟನ್ ಗಾರ್ಡನ್
ಕೆಕೆಆರ್ ಎಎಂಆರ್ ರುಬೆ ಅಪಾರ್ಟ್ಮೆಂಟ್
ಸೇರಿದಂತೆ ಹಲವು ಗಗನಚುಂಬಿ ಕಟ್ಟಡಗಳ ಪ್ರದೇಶಗಳನ್ನು ವೀಕ್ಷಿಸಿದರು. ಬಳಿಕ ಎಚ್‌ಎಂಟಿ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿ, ಗೋಲ್ಮಾಲ್ ನಡೆದಿರುವ ಭೂಮಿಯ ಬಗ್ಗೆ ಪರಿಪೂರ್ಣ ವರದಿ ಸಲ್ಲಿಸಲು ಕಡಕ್ ಆದೇಶ ನೀಡಿದರು.
ಈಶ್ವರ್ ಖಂಡ್ರೆಗೆ ನೇರ ಸವಾಲು
“ಕೈಗಾರಿಕಾ ಪ್ರಗತಿಗಾಗಿ ಇದ್ದ ಸರ್ಕಾರಿ ಜಾಗವನ್ನು ಲೂಟಿ ಮಾಡುವಲ್ಲಿ ಅಂದಿನ ಕಂಪನಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಪ್ರಭಾವಿ ನಾಯಕರು ಕೈಜೋಡಿಸಿದ್ದರು” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ನೇರ ಪ್ರಶ್ನೆ ಹಾಕಿದ ಅವರು, “ಅಕ್ರಮವಾಗಿ ಕಬಳಿಸಲಾಗಿರುವ ಈ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ರಾಜ್ಯ ಸರ್ಕಾರ ಈಗ ವಾಪಸ್ ಮುಟ್ಟುಗೋಲು ಹಾಕಿಕೊಳ್ಳುತ್ತದೆಯೇ?” ಎಂದು ಸವಾಲು ಹಾಕಿದ್ದಾರೆ
‘ಬಿಡದಿ ಟೌನ್‌ಶಿಪ್ ಮಾಡಲು ಹೊರಟವರೇ ಅಂದು ಎಚ್‌ಎಂಟಿ ಜಾಗ ಲಪಟಾಯಿಸಿದರು’:
ಎಚ್‌ಎಂಟಿ ಸಂಸ್ಥೆಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಿದ ಹಗರಣದ ಹಿಂದೆ “ಬಿಡದಿ ಟೌನ್‌ಶಿಪ್” ಮಾಡಲು ಹೊರಟಿರುವ ಪ್ರಭಾವಿ ನಾಯಕರೊಬ್ಬರ ನೇರ ಕೈವಾಡವಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದರು. ದಾಖಲೆ ಮತ್ತು ನಕ್ಷೆಗಳನ್ನು ಪ್ರದರ್ಶಿಸುವ ಮೂಲಕ ಅಂದಿನ ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದರು.
ಸಿಂಗಾಪುರ ಮಾಡಲು ಹೊರಟವರ ನೈಜ ಮುಖವಾಡ ಬಯಲು!
“ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದ 1999-2004ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ನಗರಾಭಿವೃದ್ಧಿ ಮಂತ್ರಿಯಾಗಿದ್ದವರ ಪ್ರಮೇಯದಿಂದಲೇ ಈ ಅಮೂಲ್ಯ ಭೂಮಿ ಖಾಸಗಿಯವರ ಪಾಲಾಗಿದೆ. ಇವತ್ತು ಪ್ರಜಾಸೇವೆ ಎಂದು ಭಜನೆ ಮಾಡುತ್ತಾ, ಬಿಡದಿ ಟೌನ್‌ಶಿಪ್ ನಿರ್ಮಿಸಲು ಹೊರಟಿರುವ ಮಹಾನುಭಾವನೇ ಅಂದು ಎಚ್‌ಎಂಟಿ ಜಾಗವನ್ನು ಖಾಸಗಿ ಶಕ್ತಿಗಳಿಗೆ ಕಬಳಿಸಲು ಪ್ರಮುಖ ಪಾತ್ರ ವಹಿಸಿದ್ದರು” ಎಂದು ಕುಮಾರಸ್ವಾಮಿ ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ತೀವ್ರ ವೀರೋಧ ವ್ಯಕ್ತಪಡಿಸಿದರು.
ಅಕ್ರಮವಾಗಿ ತಲೆಯೆತ್ತಿರುವ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳಿಗೆ ಜಾಗ ಕೊಡಿಸಿದವರು ಯಾರು ಮತ್ತು ಅದರಲ್ಲಿ ಯಾರು ವಾಸಿಸುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಸಚಿವರು ಎಚ್ಚರಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆಗೆ ತಿರುಗೇಟು
ದಿನನಿತ್ಯ ಅರಣ್ಯ ಭೂಮಿ ಎಂದು ಜಪಿಸುವ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ನೇರ ಸವಾಲು ಹಾಕಿದ ಕುಮಾರಸ್ವಾಮಿ, “ಮಿಸ್ಟರ್ ಈಶ್ವರ ಖಂಡ್ರೆಯವರೇ, ಬೆಂಗಳೂರು ಹಾಗೂ ಬಿಡದಿ ಪ್ರದೇಶಗಳನ್ನು ವಿಶ್ವದರ್ಜೆಯ ನಗರಗಳನ್ನಾಗಿ ಮಾಡಲು ಹೊರಟಿರುವ ವ್ಯಕ್ತಿಯ ಪಾಲು ಈ ಎಚ್‌ಎಂಟಿ ಭೂ ಲೂಟಿಯಲ್ಲಿ ಎಷ್ಟಿದೆ ಎಂಬುದನ್ನು ಮೊದಲು ಬಹಿರಂಗಪಡಿಸುವಿರಾ?” ಎಂದು ಕಟುವಾಗಿ ಪ್ರಶ್ನಿಸಿದರು.
ಸರ್ಕಾರಿ ಸಂಸ್ಥೆಗಳಿಗೆ ನೀಡಿದ್ದರೆ ಸ್ವಾಗತಿಸುತ್ತಿದ್ದೆ
“ಎಚ್‌ಎಂಟಿ ಜಾಗದಲ್ಲಿ ಇಸ್ರೋ (ISRO) ಸೇರಿದಂತೆ ಹಲವು ಸಾರ್ವಜನಿಕ ಸ್ವಾಮ್ಯದ ಉನ್ನತ ಸಂಸ್ಥೆಗಳು ದೇಶಕ್ಕಾಗಿ ಕೆಲಸ ಮಾಡುತ್ತಿವೆ. ಇಂತಹ ರಾಷ್ಟ್ರೀಯ ಸಂಸ್ಥೆಗಳಿಗೆ ಭೂಮಿ ನೀಡಿದ್ದರೆ ನಾನು ಎಂದಿಗೂ ತಪ್ಪು ಎನ್ನುತ್ತಿರಲಿಲ್ಲ. ಏಕೆಂದರೆ ಅದು ದೇಶದ ಹಿತದೃಷ್ಟಿಯಿಂದ ಜನರ ಸೇವೆಗೇ ಬಳಕೆಯಾಗುತ್ತಿತ್ತು. ಆದರೆ, ಇಲ್ಲಿ ದೇಶದ ಅಮೂಲ್ಯ ಆಸ್ತಿಯನ್ನು ಭೂಗಳ್ಳರು ಮತ್ತು ಖಾಸಗಿ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗುವಂತೆ ಮಾಡಿ, ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ” ಎಂದು ಕೇಂದ್ರ ಸಚಿವರು ಆಕ್ರೋಶ ಹೊರಹಾಕಿದರು.
ಹೆಚ್ಎಂಟಿ ಭೂಮಿ ಅಕ್ರಮ ಪರಭಾರೆ ನಿಲ್ಲಿಸಿದ್ದೇ ನಾನು:
2006ರಲ್ಲಿ ನಾನು ಮುಖ್ಯಮಂತ್ರಿ ಆಗುವ ತನಕ ಹೆಚ್ಎಂಟಿ ಭೂಮಿಯನ್ನು ಮನಸೋ ಇಚ್ಛೆ ನುಂಗಿ ನೀರು ಕುಡಿದರು. ನಾನು ಅಧಿಕಾರಕ್ಕೆ ಬಂದ ಕೂಡಲೇ ಯಾವುದೇ ಕಾರಣಕ್ಕೂ ಹೆಚ್ಎಂಟಿ ಭೂಮಿ ಮಾರಾಟ ಮಾಡುವಂತಿಲ್ಲ ಹಾಗೂ ಅದನ್ನು ನೋಂದಣಿಯನ್ನು ಮಾಡುವಂತಿಲ್ಲ ಎಂದು ಕಟ್ಟಾದೇಶ ಹೊರಡಿಸಿದೆ. ಅದರ ಫಲವಾಗಿಯೇ ಇವತ್ತು ಇಷ್ಟು ಭೂಮಿ ಉಳಿದುಕೊಂಡಿದೆ. ನಿಮಗೆ ಗೊತ್ತಿರಲಿ, ಅಕ್ರಮ ಪರಭಾರೆ ಮಾಡಲಾಗಿರುವ ಜಾಗದಲ್ಲಿ ನಿರ್ಮಿಸಿರುವ ಅಪಾರ್ಟ್ಮೆಂಟ್ ಗಳಿಗೆ ಇನ್ನೂ ಖಾತೆಯೇ ಆಗಿಲ್ಲ. ಅಲ್ಲಿನ ಫ್ಲ್ಯಾಟ್ ಮಾಲೀಕರಿಗೆ ಈವರೆಗೂ ಇ- ಖಾತಾ ಆಗಿಲ್ಲ. ನನ್ನನ್ನು ಭೇಟಿಯಾಗಿದ್ದ ಪ್ಲಾಟುಗಳ ಮಾಲೀಕರು ಖಾತೆ ಮಾಡಿಸಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಕಟ್ಟಡ ಕಟ್ಟಿ ಇವರಿಗೆ ಮಾರಿ ಹೋದವರು ಹೀಗೆ ಮೋಸ ಮಾಡಿದ್ದಾರೆ. ಪ್ಲಾಟ್ ಖರೀದಿ ಮಾಡಿದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಚಿವರು ಹೇಳಿದರು.
ನಾನು ಈ ಮುಖ್ಯಮಂತ್ರಿಗೆ ಹೇಳಲು ಬಯಸುತ್ತೇನೆ; ಇಲ್ಲಿ ಖಾತೆ ಮಾಡಿಕೊಡಿ ಎಂದು ಕೇಳುತ್ತಿರುವ ಫ್ಲ್ಯಾಟುಗಳ ಮಾಲೀಕರಿಗೆ ಖಾತೆ ಮಾಡಿಕೊಡಲು ಏಕೆ ಸಾಧ್ಯವಾಗುತ್ತಿಲ್ಲ? ಪಾಪ.. ಇವರಿಗೆ ಖಾತೆ ಮಾಡಿಕೊಡಪ್ಪ.. ಇದರ ಬಗ್ಗೆ ನೀವು ಮಾತನಾಡಬೇಕು. ಇಲ್ಲಿ ನಿಮ್ಮದು ಬೇನಾಮಿ ಜಮೀನು ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ದಾಖಲೆಗಳು ಏನು ಹೇಳುತ್ತವೆಯೋ ಪರಿಶೀಲನೆ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಸಿಎಂ ಡಿಕೆಶಿ ಮೇಲೆ ಚಾಟಿ ಬೀಸಿದರು ಕೇಂದ್ರ ಸಚಿವರು.
ಕಲ್ಲು ಹೃದಯ ಇರುವವರಿಗೆ ಬೇರೆಯವರ ನೋವು ಅರ್ಥ ಆಗೋದಿಲ್ಲ:
ಇಲ್ಲಿನ ಭೂಮಿಯನ್ನು ನೋಡಿದರೆ ಬಹಳ ನೋವಾಗುತ್ತದೆ ಎಂದು ಸಚಿವರು; ಈ ಪ್ರಕರಣಕ್ಕೆ ಸಂಬಂಧಪಟ್ಟ ನಾನು ಯಾರನ್ನು ವೈಯಕ್ತಿಕವಾಗಿ ತೆಗಳಲು ಇಚ್ಛೆಪಡುವುದಿಲ್ಲ. ಇಲ್ಲಿ ಏನೇನು ನಡೆದಿದೆಯೋ ಅಷ್ಟನ್ನೇ ಹೇಳಲು ಬಯಸುತ್ತೇನೆ. ಪ್ರಚಾರಕ್ಕಾಗಿ ನಾನು ಹೆಚ್ಎಂಟಿಗೆ ಭೇಟಿ ಕೊಡುತ್ತಿಲ್ಲ ಎಂಬುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ನಿನ್ನೆಯ ದಿನ ಮುಖ್ಯಮಂತ್ರಿ ಮಾತನಾಡಿದ ಸಂದರ್ಭದಲ್ಲಿ ನಮಗೆ ನೋವು ಕೊಡಬೇಡಿ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ನೋವು ಕೊಡುವ ಉದ್ದೇಶ ಯಾರಿಗೂ ಇಲ್ಲ. ರಾಜ್ಯದಲ್ಲಿ ಸರ್ಕಾರದ ಜಮೀನನ್ನು, ಅದರಲ್ಲೂ ಕೈಗಾರಿಕೆಗಳಿಗೆ ಮೀಸಲಿಟ್ಟಿದ್ದ ಭೂಮಿಯನ್ನು ಈ ರೀತಿಯಲ್ಲಿ ಲೂಟಿ ಮಾಡುವವರನ್ನು ನೋಡಿದರೆ ನೋವಾಗುತ್ತದೆ. ಹೃದಯ ಇದ್ದವರಿಗೆ ನೋವಾಗುತ್ತದೆ. ಕಲ್ಲು ಹೃದಯ ಇದ್ದವರಿಗೆ ಇನ್ನೊಬ್ಬರ ನೋವು ಅರ್ಥವಾಗುವುದಿಲ್ಲ ಎಂದು ಕಟುವಾಗಿ ಟೀಕಿಸಿದರು.
ಮರುಜೀವ ಕೊಡುವ ಹೊತ್ತಿನಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ:
ಹೇಗಾದರೂ ಮಾಡಿ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡಬೇಕೆಂದು ನಾನು ಪ್ರಯತ್ನ ಮಾಡುತ್ತಿದ್ದರೆ, ಅದರ ಜಾಗವನ್ನು ಕೊಳ್ಳೆ ಹೊಡೆಯಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ಯಾವುದೇ ಕಾರಣಕ್ಕೂ ಎಚ್ಎಂಟಿ ಉಳಿಯಬಾರದು ಎಂದು ರಾಜ್ಯ ಸರ್ಕಾರ ಭಾವಿಸಿದಂತಿದೆ. ಹೀಗಾಗಿ ಪುನಶ್ಚೇತನ ಪ್ಯಾಕೇಜ್ ಜಾರಿ ಬರುವುದಕ್ಕೆ ಮೊದಲೇ ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡುತ್ತಿದೆ. ಇಲ್ಲಿರುವುದು ಅರಣ್ಯ ಭೂಮಿಯೆಂದು ವಿನಾಕಾರಣ ಅಪಪ್ರಚಾರ ಮಾಡುತ್ತಿದೆ. ಅನಗತ್ಯವಾಗಿ ಕಾಟ ಕೊಟ್ಟು ಇಡೀ ಭೂಮಿಯನ್ನು ಹೊಡೆಯುವ ಪ್ಲ್ಯಾನ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಕುಮಾರಸ್ವಾಮಿ ಉಕ್ಕು ಕಾರ್ಖಾನೆಯನ್ನು ತರಲಿ ಎಂದು ಹೇಳಿರುವ ಮಹಾಶಯನಿಗೆ ನಾನು ಹೇಳುವುದಿಷ್ಟೇ; ಕುದುರೆಮುಖ ಕಬ್ಬಿಣ ಮತ್ತು ಅದರ ಕಾರ್ಖಾನೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ದೇವದಾರಿ ಗಣಿ ಯೋಜನೆಗೆ ಹಣಕಾಸು ನೆರವು ನೀಡುವ ಶಿಫಾರಸಿಗೆ ಸಂಬಂಧಿಸಿದಂತೆ ನಾನು ಉಕ್ಕು ಸಚಿವನಾದ ಮೇಲೆ ಪ್ರಪ್ರಥಮ ಸಹಿ ಹಾಕಿದೆ. ಅದೊಂದೇ ಇವರಿಗೆ ಹೊಟ್ಟೆ ಉರಿ ತಂದಿತು. ಅಂದಿನಿಂದಲೇ ನನ್ನನ್ನು ಗುರಿಯಾಗಿಸಿಕೊಂಡು ನಾನು ಮಾಡುವ ಪ್ರತಿಯೊಂದು ಕೆಲಸದ ಮೇಲೆಯೂ ಗದಾಪ್ರಹಾರ ಮಾಡಿಕೊಂಡೆ ಬರುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇರುವ ಕಾರ್ಖಾನೆಗಳನ್ನು ಉಳಿಸಲು ಈ ರಾಜ್ಯ ಸರ್ಕಾರದವರು ಬಿಡುತ್ತಿಲ್ಲ. ಇನ್ನು ಹೊಸ ಕಾರ್ಖಾನೆಗಳನ್ನು ಮಾಡುವ ಪ್ರಶ್ನೆ ಇಲ್ಲಿಂದ ಬರುತ್ತದೆ. ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಅಡ್ಡಿಪಡಿಸುತ್ತಿದ್ದಾರೆ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಾರ್ಥಿಸಿದರು.
ರಾಜ್ಯ ಸರ್ಕಾರ ಮತ್ತು ಹೆಚ್ಎಂಟಿ ನಡುವೆ ನಡೆಯುತ್ತಿರುವ ಭೂ ವ್ಯಾಜ್ಯದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ. ಅದರ ಪರಿವೇ ಇಲ್ಲದ ಸಚಿವರೊಬ್ಬರು ಅನಗತ್ಯವಾಗಿ ಹೆಚ್ಎಂಟಿ ಭೂಮಿಯ ವಿಚಾರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಹಾಗಾದರೆ ಈಗಾಗಲೇ ಅಕ್ರಮವಾಗಿ ಬರವರಿಯಾಗಿ ಖಾಸಗಿ ವ್ಯಕ್ತಿಗಳು ಕಟ್ಟಿಕೊಂಡಿರುವ ಗಗನಚುಂಬಿ ಕಟ್ಟಡಗಳ ಜಾಗವನ್ನು ಇದೇ ಈಶ್ವರ ಖಂಡ್ರೆ ವಾಪಸ್ ಪಡೆಯುವ ತಾಕತ್ತು ತೋರಿಸುತ್ತಾರೆಯೇ ಎಂದು ಕಟುವಾಗಿ ಸಚಿವರು ಪ್ರಶ್ನಿಸಿದರು.
ಒಂದು ಕಾಲದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಕೊಡುಗೆ ನೀಡಿದ ಹೆಚ್ಎಂಟಿ ಕಂಪನಿಯನ್ನು ಉಳಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಪುನಶ್ಚೇತನ ಪ್ಯಾಕೇಜ್ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದೇವೆ. ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ 175 ಎಕರೆ ಜಾಗ ಮಾರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಅದನ್ನು ಅರಣ್ಯ ಇಲಾಖೆ ಜಾಗ ಎಂದು ಕೂಡ ಹೇಳಿದ್ದಾರೆ. ಆದರೆ ಈಶ್ವರ ಖಂಡ್ರೆ ಅವರು ತಿಳಿಯಬೇಕಾದ ವಿಚಾರಗಳು ಸಾಕಷ್ಟಿವೆ. 1958-60 ರಲ್ಲಿಯೇ ನ್ಯಾಯಬದ್ಧವಾಗಿ ಈ ಜಾಗವನ್ನು ಖರೀದಿ ಮಾಡಿದೆ. ಈಶ್ವರ ಖಂಡ್ರೆ ಅವರು ಹೇಳುತ್ತಿರುವ ಜಾಗಕ್ಕೂ ರಾಜ್ಯ ಅರಣ್ಯ ಇಲಾಖೆಗೂ ಯಾವ ಸಂಬಂಧವೂ ಇಲ್ಲ. ಇಲ್ಲಿರುವ ಜಾಗದ ಸಂಪೂರ್ಣ ಹಕ್ಕು ಹೆಚ್ಎಂಟಿಗೆ ಮಾತ್ರ ಸೇರಿದೆ. ನಾನು ಸಚಿವನಾಗಿ ಬಂದಮೇಲೆ 15,000 ಎಕರೆ ಅರಣ್ಯ ಭೂಮಿ ಉಳಿಸಿದ್ದೇನೆ ಎಂದು ಹೇಳಿದ್ದಾರೆ. ಕೋಲಾರದ ಶ್ರೀನಿವಾಸಪುರದಲ್ಲಿ ಅವರು ಅರಣ್ಯ ಭೂಮಿಯನ್ನು ಹೇಗೆ ಉಳಿಸಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಭೆಗಳು ನಡೆದಿದೆ. ಆದಷ್ಟು ಬೇಗ ಪ್ಯಾಕೇಜ್ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುವುದು. ಈಗಾಗಲೇ ಡಿಪಿಆರ್ ಕೂಡ ಮಾಡಿಸಲಾಗಿದೆ. ರಾಜ್ಯಕ್ಕೆ ಒಳ್ಳೆದಾಗುವ ಸಂದರ್ಭ ಬಂದರೆ ಎಲ್ಲರೂ ಒಟ್ಟಾಗಿ ಸಹಕಾರ ನೀಡಬೇಕು. ಕರ್ನಾಟಕದಲ್ಲಿ ಅಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು.

