Sat. Aug 8th, 2026

ನೈಸ್ ರಸ್ತೆಗೆ ಯಾರೂ ಟೋಲ್ ಕಟ್ಟಬೇಡಿ; ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದ ಕೇಂದ್ರ ಸಚಿವ ಹೆಚ್ಡಿಕೆ

Share this with Friends

ಬೆಂಗಳೂರು: ನೈಸ್ (NICE) ರಸ್ತೆ ಅಕ್ರಮಗಳ ವಿರುದ್ಧ ಮತ್ತೊಮ್ಮೆ ಭಾರಿ ಸಮರ ಸಾರಿರುವ ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, “ನೈಸ್ ರಸ್ತೆಯಲ್ಲಿ ಇನ್ಮುಂದೆ ಯಾರೂ ಟೋಲ್ ಪಾವತಿಸಬೇಡಿ” ಎಂದು ಸಾರ್ವಜನಿಕರಿಗೆ ಬಹಿರಂಗ ಕರೆ ನೀಡಿದ್ದಾರೆ. ನೈಸ್ ರಸ್ತೆಯ ಅಕ್ರಮ ಟೋಲ್ ವಸೂಲಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಟ್ಟುನಿಟ್ಟಿನ ಗಡುವು ನೀಡಿರುವ ಅವರು, ಇಡೀ ಯೋಜನೆಯನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೈಕೋರ್ಟ್‌ನ ಇತ್ತೀಚಿನ ತೀರ್ಪನ್ನು ಪ್ರಸ್ತಾಪಿಸಿ ಮಾತನಾಡಿದ ಕುಮಾರಸ್ವಾಮಿ, “ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿ ಕೇವಲ ಶೇ. 15 ರಷ್ಟು ಮಾತ್ರ ರಸ್ತೆ ನಿರ್ಮಾಣ ಮಾಡಿದೆ. ಮೂಲ ಕಾಂಕ್ರೀಟ್ ರಸ್ತೆಗಳನ್ನೇ ನಿರ್ಮಿಸದೆ ಕಾನೂನುಬಾಹಿರವಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಟೋಲ್ ಲೂಟಿ ಮಾಡುತ್ತಿದೆ. ಉನ್ನತ ನ್ಯಾಯಾಲಯವೇ ಈ ಅಂಶಗಳನ್ನು ಎತ್ತಿಹಿಡಿದಿರುವುದರಿಂದ, ನೈಸ್ ಸಂಸ್ಥೆಗೆ ಟೋಲ್ ವಸೂಲಿ ಮಾಡುವ ಯಾವುದೇ ನೈತಿಕ ಹಕ್ಕಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಶೋಭಾ ಡೆವಲಪರ್ಸ್‌ಗೆ ಎನ್‌ಒಸಿ (NOC) ನೀಡಿದ್ದು ಯಾರಪ್ಪನ ಆಸ್ತಿ?:

ನೈಸ್ ಭೂ ಹಗರಣದ ವ್ಯಾಪ್ತಿಯಲ್ಲಿ ನಡೆದಿರುವ ಮತ್ತೊಂದು ಪ್ರಮುಖ ಅಕ್ರಮವನ್ನು ಬಹಿರಂಗಪಡಿಸಿದ ಸಚಿವರು, “ರೈತರಿಂದ ಮೂಲಸೌಕರ್ಯ ಅಭಿವೃದ್ಧಿ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿಯನ್ನು ನೈಸ್ ಸಂಸ್ಥೆಯು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳುತ್ತಿದೆ. ಇತ್ತೀಚೆಗೆ ಶೋಭಾ ಡೆವಲಪರ್ಸ್ (Sobha Developers) ಸಂಸ್ಥೆಗೆ ಅಕ್ರಮವಾಗಿ ನಿರಾಕ್ಷೇಪಣಾ ಪತ್ರ (NOC) ನೀಡಲಾಗಿದೆ. ಬಡ ರೈತರ ಭೂಮಿಯನ್ನು ಖಾಸಗಿ ಬಿಲ್ಡರ್‌ಗಳಿಗೆ ಧಾರೆ ಎರೆಯಲು ಇದು ಯಾರಪ್ಪನ ಆಸ್ತಿ?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ 2 ವಾರಗಳ ಡೆಡ್‌ಲೈನ್:

ಈ ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿಕೂಟವು ನೈಸ್ ವಿರುದ್ಧ ಸದನ ಸಮಿತಿ ವರದಿಯ ಆಧಾರದ ಮೇಲೆ ತನಿಖೆಗೆ ಒತ್ತಾಯಿಸಿತ್ತು. “ಕಾಂಗ್ರೆಸ್ ಸರ್ಕಾರವು ನೈಸ್ ಹಗರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಯಾಕೆ? ನೈಸ್ ಸಂಸ್ಥೆಯ ಅಕ್ರಮ ಟೋಲ್ ಹಗಲು ದರೋಡೆಯನ್ನು ನಿಲ್ಲಿಸಲು ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಮೈತ್ರಿಕೂಟದ ವತಿಯಿಂದ ನೈಸ್ ಟೋಲ್ ಗೇಟ್‌ಗಳ ಮುಂದೆ ಬೃಹತ್ ಜನಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

 

 


Share this with Friends

Related Post