ನವದೆಹಲಿ: “ಕರ್ನಾಟಕ ಲೋಕಸೇವಾ ಆಯೋಗ (KPSC)ವನ್ನು ಮುಚ್ಚುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದೇವೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯು ಕೇವಲ ಹತಾಶೆಯಷ್ಟೇ ಅಲ್ಲ, ಅದು ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿಯಾಗಿದೆ. ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ” ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿಗಳ ಹೇಳಿಕೆಗೆ ತಿರುಗೇಟು ನೀಡಿ ನವದೆಹಲಿಯಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರದ ನಿಲುವನ್ನು ಕಟು ಶಬ್ದಗಳಲ್ಲಿ ಲೇವಡಿ ಮಾಡಿದ್ದಾರೆ. “ಇವರ ವರಸೆ ಹೇಗಿದೆ ಎಂದರೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಹಾಗೂ ನೆಗಡಿಯಾಗಿದೆ ಎಂದು ಮೂಗನ್ನೇ ಕತ್ತರಿಸಿಕೊಳ್ಳಲು ಹೊರಟಂತಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಖದೀಮರನ್ನು ನೇಮಕ ಮಾಡಿದ್ದು ಯಾರು?:
ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದು ಎಂದಿಗೂ ತಪ್ಪೆಸಗುವುದಿಲ್ಲ. ಆದರೆ ಅಲ್ಲಿಗೆ ಕೆಟ್ಟ ಜನ ಬಂದು ಕುಳಿತಿದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು. “ಇಂದು ಬೇಲಿಯೇ ಹೊಲ ಮೇಯುವಂತಾಗಿದೆ. ಆ ಸಂಸ್ಥೆಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗಾಗಿ ಭ್ರಷ್ಟಾಚಾರದ ಅಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದು ಯಾರು? ಇವೆಲ್ಲವೂ ವಿಧಾನಸೌಧದ 3ನೇ ಮಹಡಿಯಲ್ಲಿ ಕುಳಿತಿರುವವರೇ ಎಸಗಿದ ಪಾಪವಲ್ಲವೇ? ಆ ಲೆಕ್ಕಕ್ಕೆ ಬರುವುದಾದರೆ ಇಡೀ ವಿಧಾನಸೌಧವನ್ನೇ ಮುಚ್ಚಬೇಕಾಗುತ್ತದೆ. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ” ಎಂದು ಮುಖ್ಯಮಂತ್ರಿಗೆ ನೇರ ಟಾಂಗ್ ನೀಡಿದ್ದಾರೆ.
ಕಿವಿಮಾತು ಹೇಳಿದ ಹೆಚ್‌ಡಿಕೆ:
ಬೌದ್ಧಿಕ ಚಪಲಕ್ಕಾಗಿ ಕೇವಲ ಬೇಜವಾಬ್ದಾರಿಯಿಂದ ನಾಲಿಗೆ ಜಾರುವ ಮುನ್ನ ಕೆಪಿಎಸ್‌ಸಿ ಎಂದರೇನು? ಅದರ ಸಂರಚನೆ, ಸ್ವರೂಪ ಮತ್ತು ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು ಎನ್ನುವುದನ್ನು ಮುಖ್ಯಮಂತ್ರಿಗಳು ಮೊದಲು ಓದಿ ತಿಳಿದುಕೊಳ್ಳಬೇಕು. ಆ ಸಂಸ್ಥೆಯು ರಾಜ್ಯದ ಆಡಳಿತ ವ್ಯವಸ್ಥೆಗೆ ನಡೆದುಬಂದ ಹಾದಿ ಮತ್ತು ಅದರ ಹೆಗ್ಗಳಿಕೆಯ ಅರಿವಿರಲಿ. “ಹೊಲಕ್ಕೆ ಕಳೆ ಬಿದ್ದರೆ ಆ ಕಳೆಯನ್ನು ಕಿತ್ತೆಸೆಯಬೇಕೇ ಹೊರತು, ಕಳೆ ತೆಗೆಯಲಾಗದೆ ಇಡೀ ಹೊಲಕ್ಕೇ ವಿಷವುಣಿಸುವ ಕೆಲಸಕ್ಕೆ ಕೈಹಾಕಬಾರದು” ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

