ಬೆಂಗಳೂರು: ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್‌ಗಳ ಕುರಿತು ಸಾರ್ವಜನಿಕ ಮತ್ತು ಸಾಂಸ್ಥಿಕ ದೂರುಗಳನ್ನು ದಾಖಲಿಸಿಕೊಂಡು ತ್ವರಿತ ತನಿಖೆ ನಡೆಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಕುರಿತು ರಾಜ್ಯ ಮಟ್ಟದಲ್ಲಿ ‘ವಿಶೇಷ ತನಿಖಾ ತಂಡ’ (SIT) ರಚಿಸಿ ಗೃಹ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ವಿಮಾ ಕಂಪನಿಗಳ ವಿರುದ್ಧ ಸಲ್ಲಿಕೆಯಾಗುವ ಇಂತಹ ವಂಚನೆಪೂರಿತ ಪ್ರಕರಣಗಳ ತನಿಖೆಗಾಗಿ ದೇಶದಾದ್ಯಂತ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿತ್ತು. ಸರ್ವೋಚ್ಚ ನ್ಯಾಯಾಲಯದ ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 5582/2023ರ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಈ ವಿಶೇಷ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದೆ.
ತಂಡದ ರಚನೆ ಮತ್ತು ಅಧಿಕಾರ ವ್ಯಾಪ್ತಿ:
ಉನ್ನತ ಅಧಿಕಾರಿಗಳ ನೇತೃತ್ವ: ಗೃಹ ಇಲಾಖೆಯ ಸೆಪ್ಟೆಂಬರ್ 22ರ ಆದೇಶದಂತೆ ರಚಿಸಲಾಗಿರುವ ಈ ವಿಶೇಷ ತಂಡಕ್ಕೆ ಪೊಲೀಸ್ ಮಹಾನಿರೀಕ್ಷಕರ (IGP) ಹುದ್ದೆಯ ಹಿರಿಯ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಿಐಡಿಯಿಂದ ನಾಮನಿರ್ದೇಶನಗೊಳ್ಳುವ ಪೊಲೀಸ್ ಅಧೀಕ್ಷಕರು (SP) ಇದರ ಸದಸ್ಯರಾಗಿರುತ್ತಾರೆ.
ಸಿಬ್ಬಂದಿ ಬಲ: ಇವರೊಂದಿಗೆ ಪೊಲೀಸ್ ಮಹಾನಿರ್ದೇಶಕರು (DGP) ನಾಮನಿರ್ದೇಶನ ಮಾಡುವ ಒಬ್ಬ ಉಪ ಪೊಲೀಸ್ ಅಧೀಕ್ಷಕರು (DySP) ಹಾಗೂ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಈ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪೊಲೀಸ್ ಠಾಣೆ ಸ್ಥಾನಮಾನ: ಇಡೀ ಕರ್ನಾಟಕ ರಾಜ್ಯಾದ್ಯಂತ ವ್ಯಾಪ್ತಿ ಹೊಂದಿರುವ ಈ ಎಸ್‌ಐಟಿಯನ್ನು ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023’ರ ಅಡಿಯಲ್ಲಿ ಅಧಿಕೃತ ‘ಪೊಲೀಸ್ ಠಾಣೆ’ ಎಂದು ಘೋಷಿಸಲಾಗಿದೆ. ತನಿಖಾ ತಂಡದ ಅಧಿಕಾರಿಗಳಿಗೆ ಸಂಬಂಧಪಟ್ಟ ನ್ಯಾಯಾಲಯಗಳಿಗೆ ನೇರವಾಗಿ ಅಂತಿಮ ವರದಿ ಸಲ್ಲಿಸುವ ಕಾನೂನಾತ್ಮಕ ಅಧಿಕಾರವನ್ನೂ ನೀಡಲಾಗಿದೆ.
ಮೇಲ್ವಿಚಾರಣೆ ಮತ್ತು ಕಾರ್ಯವಿಧಾನ:
ಈ ನೂತನ ಎಸ್‌ಐಟಿಯು ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಕಾನೂನು ಮತ್ತು ಸುವ್ಯವಸ್ಥೆ) ನೇರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲಿದೆ. ವಿಮಾ ಕಂಪನಿಗಳಿಂದ ಸ್ವೀಕೃತವಾಗುವ ಎಲ್ಲಾ ವಂಚನೆ ದೂರುಗಳನ್ನು ಪೊಲೀಸ್ ಮಹಾನಿರ್ದೇಶಕರು ಈ ತಂಡಕ್ಕೆ ವರ್ಗಾಯಿಸಲಿದ್ದಾರೆ.
ದಾಖಲಾಗುವ ಪ್ರತಿ ದೂರನ್ನು ಎಸ್‌ಐಟಿ ಸಮಗ್ರವಾಗಿ ಮತ್ತು ಯಾವುದೇ ವಿಳಂಬವಿಲ್ಲದೆ ತನಿಖೆ ನಡೆಸಿ, ವರದಿಗಳನ್ನು ಡಿಜಿಪಿ ಮೂಲಕ ನೇರವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಹಾಗೂ ತನಿಖೆಯ ಪ್ರಗತಿ ವರದಿಯನ್ನು ನಿಯಮಿತವಾಗಿ ಒದಗಿಸಬೇಕು ಎಂದು ಗೃಹ ಇಲಾಖೆಯ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

