ಬೆಂಗಳೂರು: ಇದೇ ನವೆಂಬರ್ 13ರಿಂದ ಆರಂಭವಾಗಲಿರುವ ಮಂಗಳೂರು-ಹಾಸನ ಮಾರ್ಗದ ಬಹುನಿರೀಕ್ಷಿತ ‘ವಂದೇ ಭಾರತ್’ (Vande Bharat) ಎಕ್ಸ್ಪ್ರೆಸ್ ರೈಲು ಸೇವೆಗೆ ಅಡಚಣೆಯಿಲ್ಲದಂತೆ ನಿರಂತರ ವಿದ್ಯುತ್ ಪೂರೈಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಸಕಲ ಸಿದ್ಧತೆ ಕೈಗೊಂಡಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ನಗರದ ‘ಇಂಧನ ಭವನ’ದಲ್ಲಿ ಕೆಪಿಟಿಸಿಎಲ್ನ ಪೂರ್ವಸಿದ್ಧತೆಗಳ ಕುರಿತು ಅವರು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಸವಾಲಿನಿಂದ ಕೂಡಿರುವ ಘಟ್ಟ ಪ್ರದೇಶದ ಮಾರ್ಗವೂ ಸೇರಿದಂತೆ ಇಡೀ ರೈಲು ಮಾರ್ಗದಲ್ಲಿ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
24 ಗಂಟೆ ನಿಗಾ ಮತ್ತು ತುರ್ತು ತಂಡಗಳ ನಿಯೋಜನೆ:
ಸಭೆಯಲ್ಲಿ ಮಂಗಳೂರು-ಹಾಸನ ಮಾರ್ಗದ 12 ಪ್ರಮುಖ ರೈಲು ನಿಲ್ದಾಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕ ಕೇಂದ್ರಗಳ ಮೂಲಸೌಕರ್ಯವನ್ನು ಪರಿಶೀಲಿಸಲಾಯಿತು. ನವೆಂಬರ್ 13ರಿಂದ ಪ್ರಮುಖ ಸ್ಥಳಗಳಲ್ಲಿ ತಾಂತ್ರಿಕ ಸಿಬ್ಬಂದಿ ಹಾಗೂ ತುರ್ತು ಸ್ಪಂದನಾ ತಂಡಗಳನ್ನು (Emergency Response Teams) ನಿಯೋಜಿಸಿ, ದಿನದ 24 ಗಂಟೆಯೂ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ರಾಮ್ ಪ್ರಸಾತ್ ಮನೋಹರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆಧುನಿಕ ಸಾರಿಗೆ ವ್ಯವಸ್ಥೆಯ ಯಶಸ್ವಿ ಕಾರ್ಯಾಚರಣೆಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುವ ಮೂಲಕ ಸುಗಮ ರೈಲು ಸಂಚಾರಕ್ಕೆ ನೆರವಾಗುವುದು ಹಾಗೂ ಕರಾವಳಿ ಕರ್ನಾಟಕದ ಸಂಪರ್ಕ ವ್ಯವಸ್ಥೆ, ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

