Sun. Aug 9th, 2026

ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ: ಸಿಎಂ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗದಿಂದ ದೂರು

Share this with Friends

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಗೂಂಡಾಗಿರಿ ಮಾದರಿಯಲ್ಲಿ ಬಲವಂತವಾಗಿ ರಾಜೀನಾಮೆ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಇತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.

ಲೋಕಭವನಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿತು. ಹೊರಟ್ಟಿ ರಾಜೀನಾಮೆ ವಿಚಾಎದ ಕುರಿತು ವಿವರವಾದ ಮಾಹಿತಿ ನೀಡಿ ಲಿಖಿತ ದೂರು ಸಲ್ಲಿಸಿತು.

ಪತ್ರದಲ್ಲಡಗಿರುವ ಗಂಭೀರ ಆರೋಪಗಳು:

ಗೂಂಡಾಗಿರಿ ಮತ್ತು ಬೆದರಿಕೆ: ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಆಗಸ್ಟ್ 14 ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಆದಾಗ್ಯೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮ್ಮದ್, ರವಿ ಹಾಗೂ ಇತರರು ಸಭಾಪತಿಯವರ ಕಚೇರಿಗೆ ನುಗ್ಗಿ, 1.30 ಗಂಟೆಗೂ ಹೆಚ್ಚು ಕಾಲ ಅವರ ಮೇಲೆ ತೀವ್ರ ರಾಜಕೀಯ ಒತ್ತಡ ಹೇರಿ, ಗೂಂಡಾಗಳಂತೆ ಬೆದರಿಸಿ ಅಸಂವಿಧಾನಿಕವಾಗಿ ರಾಜೀನಾಮೆ ಪಡೆದಿದ್ದಾರೆ.

ಲೆಟರ್ ಹೆಡ್ ದುರ್ಬಳಕೆ: ನಿಯಮಗಳನ್ನು ಗಾಳಿಗೆ ತೂರಿ ಸಭಾಪತಿಗಳ ಆಪ್ತ ಕಾರ್ಯದರ್ಶಿಗೆ (PS) ಕರೆ ಮಾಡಿ, ಸಭಾಪತಿಗಳ ಅಧಿಕೃತ ಲೆಟರ್ ಹೆಡ್ ತರಿಸಿಕೊಳ್ಳಲಾಗಿದೆ.

ಅಸಂವಿಧಾನಿಕ ರಾಜೀನಾಮೆ ಸೃಷ್ಟಿ: ಆ ಲೆಟರ್ ಹೆಡ್ ಮೇಲೆ ಆಡಳಿತ ಪಕ್ಷದ ನಾಯಕರೇ ಮಿಥ್ಯವಾಗಿ (ಸುಳ್ಳು) ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ, ಸಭಾಪತಿಗಳಿಂದ ಬಲವಂತವಾಗಿ ಹಾಗೂ ಅಸಂವಿಧಾನಿಕವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ಶಾಸಕಾಂಗದ ಮೇಲ್ಮನೆಯ ಮುಖ್ಯಸ್ಥರ ಮೇಲೆ ಕಾರ್ಯಾಂಗದ ಮುಖ್ಯಸ್ಥರು ಈ ರೀತಿ ದೌರ್ಜನ್ಯ ನಡೆಸಿರುವುದು ಭಾರತೀಯ ಸಂವಿಧಾನದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವಾಗಿದೆ ಎಂದು ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ನಿಯೋಗದ ಪ್ರಮುಖ ಬೇಡಿಕೆಗಳು:

ಗೂಂಡಾಗಿರಿ ಮತ್ತು ಕಾನೂನುಬಾಹಿರ ಒತ್ತಡದಿಂದ ಸೃಷ್ಟಿಸಲಾದ ಈ ಅಸಂವಿಧಾನಿಕ ರಾಜೀನಾಮೆಯನ್ನು ರಾಜ್ಯಪಾಲರು ತಕ್ಷಣವೇ ತಿರಸ್ಕರಿಸಬೇಕು.

ಸಭಾಪತಿಗಳ ಮೇಲೆ ಅಕ್ರಮ ಒತ್ತಡ ಹೇರಿ ಶಾಸಕಾಂಗದ ಸ್ವಾಯತ್ತತೆಗೆ ಧಕ್ಕೆ ತಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಸಲೀಂ ಅಹಮ್ಮದ್, ರವಿ ಹಾಗೂ ಇತರರ ವಿರುದ್ಧ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ತನಿಖೆಗೆ ಆದೇಶಿಸಬೇಕು.

ಪ್ರಜಾಪ್ರಭುತ್ವ ವಿರೋಧಿ ಕೃತ್ಯವೆಸಗಿದ ಈ ನಾಯಕರ ವಿರುದ್ಧ ಸಂವಿಧಾನದ ಅನ್ವಯ ಕಠಿಣ ಕ್ರಮ ಜರುಗಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಪಿ.ಹೆಚ್. ಪೂಜಾರ್, ಗೋಪಿನಾಥ್ ರೆಡ್ಡಿ, ಟಿ.ಎ. ಶರವಣ ಸೇರಿದಂತೆ ಪಕ್ಷದ ಪ್ರಮುಖರು ಈ ನಿಯೋಗದಲ್ಲಿದ್ದರು.

 


Share this with Friends

Related Post