Fri. Sep 25th, 2026

ಮೈಸೂರು ದಸರಾ 2026: ಉದ್ಘಾಟಕರಾಗಿ ಕೊಪ್ಪಳ ಗವಿಮಠದ ಶ್ರೀಗಳ ಆಯ್ಕೆ

Share this with Friends

ಬೆಂಗಳೂರು/ಮೈಸೂರು: ಈ ಬಾರಿಯ ಸಾಂಸ್ಕೃತಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026 ರನ್ನು ಉದ್ಘಾಟಿಸಲು ಉತ್ತರ ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಕೊಪ್ಪಳದ ಶ್ರೀ ಗವಿಮಠದ  ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಘೋಷಣೆ ಮಾಡಿದ್ದಾರೆ.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಸಿಎಂ,ಕಳೆದ ಕೆಲವು ದಿನಗಳಿಂದ ಕ್ರೀಡೆ, ಕಾನೂನು ಹಾಗೂ ಸಾಮಾಜಿಕ ವಲಯದ ಹಲವು ಗಣ್ಯರ ಹೆಸರುಗಳು ಚರ್ಚೆಯಲ್ಲಿದ್ದವು. ಅಂತಿಮವಾಗಿ ಇಡೀ ನಾಡಿನಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಹಾಗೂ ತಮ್ಮ ದಾಸೋಹ, ಶಿಕ್ಷಣ ಮತ್ತು ಜಲ ಕ್ರಾಂತಿಯಂತಹ ಜನಪರ ಕಾರ್ಯಗಳಿಂದ ‘ನಡೆದಾಡುವ ದೇವರೆಂದೇ’ ಖ್ಯಾತರಾಗಿರುವ ಗವಿಮಠದ ಶ್ರೀಗಳನ್ನು ಸರ್ಕಾರ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದರು.

ಅಕ್ಟೋಬರ್ 11 ರಂದು ದಸರಾ ಗೋಪುರ ಉದ್ಘಾಟನೆ:

ಮುಖ್ಯಮಂತ್ರಿಗಳ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 11 ರಂದು ಬೆಳಿಗ್ಗೆ 11:00 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಸದನದಲ್ಲಿ ಸಿಎಂ ಶ್ಲಾಘನೆ:

“ಗವಿಮಠದ ಶ್ರೀಗಳು ಕೇವಲ ಆಧ್ಯಾತ್ಮಿಕ ಗುರುಗಳಲ್ಲ, ಅವರು ಬರಪೀಡಿತ ಬಯಲುಸೀಮೆಯ ಭಾಗದಲ್ಲಿ ಕೆರೆಗಳ ಹೂಳೆತ್ತುವ ಮೂಲಕ ಇಡೀ ನಾಡಿಗೆ ಜಲಸಂರಕ್ಷಣೆಯ ಮಹತ್ವ ಸಾರಿದ ಮಹಾ ಚೇತನ. ಇಂತಹ ಶ್ರೇಷ್ಠ ಸಂತರಿಂದ ದಸರಾ ಉದ್ಘಾಟನೆಗೊಳ್ಳುತ್ತಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯ” ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಸರ್ಕಾರದ ಈ ನಿರ್ಧಾರಕ್ಕೆ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲಾ ಶಾಸಕರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು

 

 


Share this with Friends

Related Post