Sun. Aug 9th, 2026

2028 ಮತ್ತು 2029ರ ಚುನಾವಣೆಯೇ ಕಾಂಗ್ರೆಸ್ ಮುಂದಿನ ಗುರಿ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

Share this with Friends

ಬೆಂಗಳೂರು: “ನಮ್ಮ ಮುಂದಿನ ಸ್ಪಷ್ಟ ಗುರಿ 2028ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯಾಗಿದೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯ ‘ಭಾರತ ಜೋಡೋ ಭವನ’ದಲ್ಲಿ ಭಾನುವಾರ ನಡೆದ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶ ಹಾಗೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹಲವು ಪಿತೂರಿಗಳು ನಡೆಯುತ್ತಿವೆ. ಆದರೆ ಕಾಂಗ್ರೆಸ್ ಪಕ್ಷವು ಇಂತಹ ಸವಾಲುಗಳಿಗೆ ಎಂದಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಮತ್ತು ಕುಗ್ಗುವುದಿಲ್ಲ ಎಂದು ಅವರು ದೃಢವಾಗಿ ಹೇಳಿದರು.

ದೇಶದಿಂದ ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಕುಟುಂಬವನ್ನು ಹೊರಹಾಕಲು ದೊಡ್ಡ ಷಡ್ಯಂತ್ರವೇ ನಡೆಯಿತು. ಆದರೆ, ಕೇವಲ 25 ಲೋಕಸಭಾ ಸ್ಥಾನಗಳ ಅಂತರದಿಂದ ನಮ್ಮ ‘ಇಂಡಿಯಾ’ (INDIA) ಒಕ್ಕೂಟವು ಕೇಂದ್ರದಲ್ಲಿ ಅಧಿಕಾರ ಹಿಡಿಯುವುದರಿಂದ ವಂಚಿತವಾಯಿತೇ ವಿನಃ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಅಥವಾ ತೆಲಂಗಾಣ ಸೇರಿದಂತೆ ಎಲ್ಲೂ ಕಾಂಗ್ರೆಸ್ ಅನ್ನು ಅಳಿಸಲು ಸಾಧ್ಯವಾಗಿಲ್ಲ. ಹಿಂದೆ ದೇಶದ ಒಗ್ಗಟ್ಟಿಗಾಗಿ ರಾಹುಲ್ ಗಾಂಧಿ ಅವರು ನಡೆಸಿದ ಪಾದಯಾತ್ರೆಯ ಪರಿಣಾಮವಾಗಿಯೇ ರಾಜ್ಯದ ಜನತೆ ಕಳೆದ ಚುನಾವಣೆಯಲ್ಲಿ ನಮಗೆ 136 ಸ್ಥಾನಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಅದೇ ರೀತಿ ಮುಂದಿನ ಚುನಾವಣೆಗಳಲ್ಲೂ ಹೊಸ ಸಂದೇಶ ನೀಡಲು ಪಕ್ಷ ಸಜ್ಜಾಗಬೇಕಿದೆ ಎಂದು ವಿವರಿಸಿದರು.

₹1,000 ಕೋಟಿ ವೆಚ್ಚದಲ್ಲಿ 10 ಸಾವಿರ ಯುವ ಶಕ್ತಿ ಸಂಘಗಳ ಸ್ಥಾಪನೆ:

ಮುಂದಿನ ರಾಜಕೀಯ ಗುರಿಗಳನ್ನು ತಲುಪಲು ಯುವ ಸಮೂಹವನ್ನು ಸಂಘಟಿಸುವ ದೊಡ್ಡ ಕೊಡುಗೆಯೊಂದನ್ನು ಇದೇ ವೇಳೆ ಮುಖ್ಯಮಂತ್ರಿಯವರು ಪ್ರಕಟಿಸಿದರು. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರದ ವಾರ್ಡ್‌ಗಳಲ್ಲಿ ಯುವಕರನ್ನು ಒಟ್ಟುಗೂಡಿಸಲು ‘ಭಾರತ ಜೋಡೋ ಯುವ ಶಕ್ತಿ ಸಂಘ’ಗಳನ್ನು ಸ್ಥಾಪಿಸಲಾಗುವುದು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಒಟ್ಟು 10 ಸಾವಿರ ಸಂಘಗಳನ್ನು ರಚಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಸರ್ಕಾರ ₹1,000 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. 16 ರಿಂದ 40 ವರ್ಷದೊಳಗಿನ ಯುವಕ-ಯುವತಿಯರು ಕೇವಲ ₹10 ಗೌರವ ಧನ ನೀಡಿ ಈ ತಿಂಗಳಿನಿಂದಲೇ ಸದಸ್ಯತ್ವ ಪಡೆಯಬಹುದು. ಯುವಕರಲ್ಲಿ ನಾಯಕತ್ವ ಗುಣ, ಕ್ರೀಡೆ, ಸಾಂಸ್ಕೃತಿಕ ಆಸಕ್ತಿ ಬೆಳೆಸಲು ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.

 


Share this with Friends

Related Post