ಬೆಂಗಳೂರು: ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಅಧಿಕೃತ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಅದ್ಭುತ ಟ್ರೈಲರ್ ಹಾಗೂ ಚಿತ್ರದ ಮೇಕಿಂಗ್ ನೋಡಿ ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಇಡೀ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಚಿತ್ರದ ಭವ್ಯತೆ ಮತ್ತು ತಂತ್ರಜ್ಞರ ಶ್ರಮವನ್ನು ಕೊಂಡಾಡಿರುವ ಯೋಗರಾಜ್ ಭಟ್, ‘ಟಾಕ್ಸಿಕ್’ ಕೇವಲ ಸಿನಿಮಾ ಅಲ್ಲ, ಇದು ಇಡೀ ಚಿತ್ರತಂಡದ ಹಗಲಿರುಳಿನ ತಪಸ್ಸು ಎಂದು ಬಣ್ಣಿಸಿದ್ದಾರೆ. ನಾಯಕ ನಟ ಯಶ್ ಅವರ ಕಲಾತ್ಮಕ ದೃಷ್ಟಿಕೋನ ಹಾಗೂ ವಿಶಾಲ್ ಮಿಶ್ರಾ ಅವರ ಅದ್ಭುತ ಸಂಗೀತದ ಸಂಯೋಜನೆಯನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಮೂಡಿಬಂದಿರುವ ವಿಶುವಲ್ಸ್ ಮತ್ತು ಆಕ್ಷನ್ ದೃಶ್ಯಗಳು ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಲಿವೆ ಎಂದು ಭಟ್ಟರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ, ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರು ಹಾಡುಗಳನ್ನು ಬರೆದಿದ್ದಾರೆ. ಸದ್ಯ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

