Sun. Aug 9th, 2026

ಬದಲಾಗುತ್ತಿದೆ ಸಿಲಿಕಾನ್ ಸಿಟಿ ರಸ್ತೆಗಳ ಮುಖಪುಟ: ದಾಸರಹಳ್ಳಿಯ ಬ್ಲಾಕ್ ಸ್ಪಾಟ್ ಸೌಂದರ್ಯೀಕರಣಕ್ಕೆ ಫ್ಯಾನ್ಸ್ ಫಿದಾ!

Share this with Friends

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ದಾಸರಹಳ್ಳಿ ವಲಯದಲ್ಲಿ ಸಾರ್ವಜನಿಕರು ನಿರಂತರವಾಗಿ ತ್ಯಾಜ್ಯ ಸುರಿಯುತ್ತಿದ್ದ ಪ್ರಮುಖ ಕಪ್ಪು ಚುಕ್ಕೆ (Black Spot) ಯೊಂದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಕಣ್ಮನ ಸೆಳೆಯುವ ಕಲಾಕೃತಿಗಳು ಮತ್ತು ಹಸಿರಿನಿಂದ ಮರುರೂಪಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಡಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ.

ಚಿತ್ತಾಕರ್ಷಕ ಗೋಡೆ ಚಿತ್ರಗಳು ಮತ್ತು ಹಸಿರು ಪರಿಸರ:

‘ಕಪ್ಪು ಚುಕ್ಕೆಗಳ ಸ್ವಚ್ಛತೆ ಮತ್ತು ಸೌಂದರ್ಯೀಕರಣ’ ವಿಶೇಷ ಅಭಿಯಾನದ ಅಡಿಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆ ಬದಿಯ ಫುಟ್‌ಪಾತ್ ಜಾಗವನ್ನು ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಕಸ ಮುಕ್ತಗೊಳಿಸಿದ್ದಾರೆ. ಕಸದ ದುರ್ವಾಸನೆಯಿಂದ ಕೂಡಿದ್ದ ಇಲ್ಲಿನ ಸುದೀರ್ಘ ಗೋಡೆಗೆ ಈಗ ಬಿಳಿ ಮತ್ತು ಹಸಿರು ಬಣ್ಣ ಬಳಿದು, ಸುಂದರವಾದ ಮರಗಳು, ಗಿಡಗಳು ಹಾಗೂ ಹೂವುಗಳ ಚಿತ್ರಗಳನ್ನು ಬಿಡಿಸುವ ಮೂಲಕ ಪರಿಸರ ಜಾಗೃತಿಯ ಸಂದೇಶ ಸಾರಲಾಗಿದೆ.

ಅಲ್ಲದೆ, ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಸುಂದರವಾದ ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದ್ದು, ಸಾಲಾಗಿ ಆಕರ್ಷಕ ಕುಂಡಗಳಲ್ಲಿ ಹಸಿರು ಗಿಡಗಳನ್ನು ಇಟ್ಟು ಸೌಂದರ್ಯವನ್ನು ದುಪ್ಪಟ್ಟುಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತರ ನೇರ ಉಸ್ತುವಾರಿಯಲ್ಲಿ ಈ ಕಾಯಕಲ್ಪ ನಡೆದಿದ್ದು, ಸಾರ್ವಜನಿಕರು ಇನ್ನು ಮುಂದೆ ಈ ಜಾಗದಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗಿದೆ. ಬೆಂಗಳೂರನ್ನು ಹೆಚ್ಚು ಸ್ವಚ್ಛ ಹಾಗೂ ವಾಸಯೋಗ್ಯ ನಗರವನ್ನಾಗಿ ಪರಿವರ್ತಿಸುವುದೇ ಈ ಬೃಹತ್ ಆಂದೋಲನದ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 


Share this with Friends

Related Post