ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿರುವುದರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಜಂಟಿಯಾಗಿ ಬೀದಿಗಿಳಿಯಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಪ್ರಮುಖ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಪರಿಶಿಷ್ಟ ಪಂಗಡದ ನಾಯಕರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ 187 ಕೋಟಿ ರೂ. ಹಣದ ಲೂಟಿಯಲ್ಲಿ ನಾಗೇಂದ್ರ ಅವರ ಪಾತ್ರ ದೊಡ್ಡದಿದೆ ಎಂದು ಆರೋಪಿಸಿದ ಅಶೋಕ್, “ಸಿಬಿಐ ಚಾರ್ಜ್ಶೀಟ್ನಲ್ಲಿ ಈ ಹಣ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಸಂಪೂರ್ಣ ವಿವರವಿದೆ. ನಾಗೇಂದ್ರ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಬೆದರಿಕೆ ಒಡ್ಡಿರುವ ಕಾರಣಕ್ಕಾಗಿಯೇ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇಂತಹ ಕಳಂಕಿತರಿಗೆ ಸಚಿವರಾಗುವ ಯಾವುದೇ ಯೋಗ್ಯತೆ ಇಲ್ಲ” ಎಂದು ಕಿಡಿಕಾರಿದರು.
ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ:
ನಾಗೇಂದ್ರ ಅವರ ಮರು ಸೇರ್ಪಡೆ, ಬಿಡದಿ ಟೌನ್ಶಿಪ್ ವಿವಾದ ಹಾಗೂ ಕೆಪಿಎಸ್ಸಿ ಅಕ್ರಮಗಳ ವಿರುದ್ಧ ಜೆಡಿಎಸ್ ಜೊತೆಗೂಡಿ ಉಭಯ ಸದನಗಳ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ರೂಪಿಸಲಾಗುವುದು ಎಂದರು. ಸದ್ಯದ ಸರ್ಕಾರದಲ್ಲಿ ಕೇವಲ ಮುಖ್ಯಮಂತ್ರಿ ಬದಲಾವಣೆ ಮತ್ತು ಖಾತೆ ಹಂಚಿಕೆಯ ಕಿತ್ತಾಟಗಳೇ ನಡೆಯುತ್ತಿದ್ದು, ಆಡಳಿತ ಸಂಪೂರ್ಣ ಹಳಿತಪ್ಪಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿ ಎಂದು ಆರ್. ಅಶೋಕ್ ಆಕ್ರೋಶ ಹೊರಹಾಕಿದರು.

