ಕೋಲಾರ: “ಕಾಂಗ್ರೆಸ್ ಸರ್ಕಾರದ ಏಳನೇ ಗ್ಯಾರಂಟಿಯೇ ‘ನೀರಿನ ಗ್ಯಾರಂಟಿ’. ಎತ್ತಿನಹೊಳೆ ಯೋಜನೆ ಅಸಾಧ್ಯ ಎಂದು ಜೆಡಿಎಸ್ ನಾಯಕರು ಲೇವಡಿ ಮಾಡುತ್ತಿದ್ದರೂ, ನಾವು ಕಷ್ಟಕರವಾದ ಈ ಯೋಜನೆಯನ್ನು 2027ರ ವೇಳೆಗೆ ಪೂರ್ಣಗೊಳಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಿಯೇ ತೀರುತ್ತೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವಿವಿಧ ಇಲಾಖೆಯ ಸುಮಾರು 3,200 ಕೋಟಿ ರೂಪಾಯಿಯ ಸರ್ವತೋಮುಖ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, “ನಮಗೆ ಅಧಿಕಾರ ಎಂಬುದು ಕೇವಲ ಶಕ್ತಿಯ ಸಂಕೇತವಲ್ಲ, ಅದೊಂದು ಜನಸೇವೆಯ ಜವಾಬ್ದಾರಿ. ಪ್ರಜಾಪ್ರಭುತ್ವದಲ್ಲಿ ಜನರೇ ದೇವರು ಎಂದು ನಂಬಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ” “ಇದು ಕೇವಲ ಚಿನ್ನದ ನಾಡಲ್ಲ; ಸಾಹಿತ್ಯ ದಿಗ್ಗಜ ಡಿ.ವಿ.ಜಿ ಹಾಗೂ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರನ್ನು ನೀಡಿದ ಪುಣ್ಯಭೂಮಿ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 2,000 ಅಡಿಗೆ ಕುಸಿದಿದ್ದರೂ ಇಲ್ಲಿನ ರೈತರು ಧೃತಿಗೆಡದೆ ಬೆಂಗಳೂರಿಗೆ ಹಾಲು, ರೇಷ್ಮೆ, ತರಕಾರಿ ಪೂರೈಸಿ ತಮ್ಮ ಸ್ವಾಭಿಮಾನ ಮೆರೆದಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಇಲ್ಲಿನ ರೈತರಿಂದ ತರಕಾರಿ ಖರೀದಿಸಿ ಬೆಂಗಳೂರಿನ ಜನರಿಗೆ ಉಚಿತವಾಗಿ ವಿತರಿಸಿದ್ದನ್ನು ರಾಜ್ಯ ಸದಾ ಸ್ಮರಿಸುತ್ತದೆ” ಎಂದರು.
ಶಾಸಕ ನಂಜೇಗೌಡರ ಅಭಿವೃದ್ಧಿ ಕಾರ್ಯ ಶ್ಲಾಘನೆ:
ಸ್ಥಳೀಯ ಶಾಸಕ ನಂಜೇಗೌಡರು ರಾಜ್ಯಕ್ಕೆ ಆದರ್ಶಪ್ರಾಯರಾಗಿದ್ದು, ತಮ್ಮ ಕ್ಷೇತ್ರಕ್ಕೆ ಸುಮಾರು 3,200 ಕೋಟಿ ರೂ. ಅನುದಾನ ತಂದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಡಿಸಿಎಂ ಪ್ರಶಂಸಿಸಿದರು. ಕಾಯಕ ಹಾಗೂ ಜನಪರ ನಿಲುವಿನಿಂದ ಮಾತ್ರ ನಾಯಕತ್ವ ಒಲಿಯುತ್ತದೆ. ‘ಅಧಿಕಾರ ನಶ್ವರ, ಸಾಧನೆ ಅಜರಾಮರ’ ಎಂಬ ಧ್ಯೇಯದೊಂದಿಗೆ ನಮ್ಮ ಸರ್ಕಾರ ಸದಾ ರೈತರ ಕಣ್ಣೀರು ಒರೆಸುವ ಕೆಲಸ ಮಾಡಲಿದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು
ಕೆರೆ ತುಂಬಿಸುವ ಬೃಹತ್ ಯೋಜನೆಗಳು:
” ಕೆ.ಸಿ. ವ್ಯಾಲಿ ಯೋಜನೆಯಡಿ 104 ಕೆರೆಗಳಿಗೆ ನೀರು ಹರಿಸಲಾಗಿದೆ. ಹೆಚ್.ಎನ್. ವ್ಯಾಲಿ ಯೋಜನೆಯ ಮೂಲಕ 65 ಕೆರೆಗಳನ್ನು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಜಿಲ್ಲೆಯ 700ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ರೈತರ ಹಿತದೃಷ್ಟಿಯಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರ ಕೆಲವು ಹೊಸ ಜಲ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ” ಎಂದು ತಿಳಿಸಿದರು.
ಕೋಲಾರಕ್ಕೆ ವೈದ್ಯಕೀಯ ಕಾಲೇಜು ಹಾಗೂ ಎಪಿಎಂಸಿ ಆಸ್ತಿ:
“ಕೋಲಾರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲದಿದ್ದರೂ, ಇಲ್ಲಿನ ಪ್ರತಿಯೊಬ್ಬ ಶಾಸಕರು ನಮಗೆ ಮುಖ್ಯಮಂತ್ರಿ ಹಾಗೂ ಸಚಿವರಷ್ಟೇ ಸಮಾನರು. ಅವರಿಗೆ ಸಂಪೂರ್ಣ ಶಕ್ತಿ ತುಂಬಲಾಗುವುದು. ಈಗಾಗಲೇ ಬಜೆಟ್‌ನಲ್ಲಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಲಾಗಿದೆ. ಇದರೊಂದಿಗೆ ಕೋಲಾರ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ 60 ಎಕರೆ ಜಮೀನು ಮಂಜೂರು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಜನರ ಯಾವುದೇ ನಿರೀಕ್ಷೆಗಳನ್ನು ಸರ್ಕಾರ ಹುಸಿಗೊಳಿಸುವುದಿಲ್ಲ” ಎಂದು ಡಿಸಿಎಂ ಭರವಸೆ ನೀಡಿದರು.

