ಕೋಲಾರ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಹಾಗೂ ನೂತನ ಸಚಿವ ಸ್ಥಾನ ಹಂಚಿಕೆ ಪ್ರಕ್ರಿಯೆ ಅಧಿವೇಶನ ಆರಂಭಕ್ಕೂ ಮೊದಲೇ ನಡೆಯಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಕೋಲಾರದಲ್ಲಿ ಮಾತನಾಡಿದ ಅವರು,ಸಧ್ಯದಲ್ಲೇ ಸಚಿವ ಸ್ಥಾನ ಹಂಚಿಕೆಯ ಎಲ್ಲಾ ಗೊಂದಲಗಳು ಬಗೆಹರಿದು ಸ್ಪಷ್ಟತೆ ಸಿಗಲಿದೆ ಮತ್ತು ಮುಂಬರುವ ಅಧಿವೇಶನದ ಒಳಗಾಗಿಯೇ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ಚರ್ಚೆ ಮುಕ್ತಾಯ:
ಸಂಪುಟ ವಿಸ್ತರಣೆಯ ಕುರಿತು ಈಗಾಗಲೇ ನವದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ವಿಸ್ತೃತವಾದ ಸುತ್ತಿನ ಮಾತುಕತೆಗಳು ನಡೆದಿವೆ.ಹೊಸ ಸಚಿವರಿಗೆ ಖಾತೆ ಹಂಚಿಕೆ ಈಗ ಮೊದಲ ಆಧ್ಯತೆಯಾಗಿ ನಡೆಯಲಿದೆ ಎಂದರು.
ದೇವೇಗೌಡರ ಬಿಡದಿ ಹೋರಾಟದ ವಿರುದ್ಧ ಸಿಎಂ ವಾಗ್ದಾಳಿ:
ಇದೇ ಸಂದರ್ಭದಲ್ಲಿ ಬಿಡದಿ ಟೌನ್‌ಶಿಪ್ ವಿಚಾರವಾಗಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಮತ್ತು ಪ್ರತಿಭಟನೆಗಳ ವಿರುದ್ಧ ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೇವಲ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಹೋರಾಟದ ನಾಟಕವಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಈ ಪ್ರತಿಭಟನೆಯಲ್ಲಿ ಸ್ಥಳೀಯ ರೈತರು ಯಾರು ಭಾಗಿಯಾಗಿಲ್ಲ, ಬದಲಿಗೆ ಹೊರಗಿನ ಕ್ಷೇತ್ರಗಳಿಂದ ತಮ್ಮ ಪಕ್ಷದ ಕಾರ್ಯಕರ್ತರನ್ನು ಬಿಡದಿಗೆ ಕರೆತಂದು ಕೃತಕ ಹೋರಾಟ ಸೃಷ್ಟಿಸಲಾಗುತ್ತಿದೆ ಎಂದು ಸಿಎಂ ದೂರಿದರು. ಆದಾಗ್ಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅವರ ಹಕ್ಕಾಗಿದ್ದು, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.
ನೈಸ್ ರೋಡ್ ಯೋಜನೆಗೆ ಸಹಿ ಮಾಡಿದ್ದು ಗೌಡರೇ:
ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಿಸಿದ್ದ ಜನಪರ ಯೋಜನೆಗಳನ್ನೇ ನಮ್ಮ ಸರ್ಕಾರ ಈಗ ಮತ್ತಷ್ಟು ವಿಸ್ತರಿಸಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಮುಖ್ಯಮಂತ್ರಿಗಳು ನೆನಪಿಸಿದರು. “ಅಂದು ಅವರು ಬಜೆಟ್‌ನಲ್ಲಿ ಕೇವಲ ₹25 ಲಕ್ಷ ನೀಡುವುದಾಗಿ ಹೇಳಿದ್ದರು, ಆದರೆ ನಮ್ಮ ಸರ್ಕಾರ ಬಡವರ ಹಿತಕ್ಕಾಗಿ ಇಂದು ₹2 ರಿಂದ ₹3 ಕೋಟಿ ರೂಪಾಯಿಗಳವರೆಗೆ ಅನುದಾನವನ್ನು ಹೆಚ್ಚಿಸಿದೆ” ಎಂದರು. ಪ್ರಸ್ತುತ ವಿವಾದಕ್ಕೀಡಾಗಿರುವ ನೈಸ್ ರಸ್ತೆ (NICE Road) ಯೋಜನೆ ಮತ್ತು ಬಿಡದಿ ಟೌನ್‌ಶಿಪ್ ಯೋಜನೆಗಳೆರಡರ ಅಧಿಕೃತ ಕಡತಗಳಿಗೆ ಅಂದು ಖುದ್ದಾಗಿ ದೇವೇಗೌಡರೇ ಸಹಿ ಹಾಕಿ ಅನುಮೋದನೆ ನೀಡಿದ್ದರು ಎಂಬುದನ್ನು ಸಿಎಂ ಬಹಿರಂಗಪಡಿಸಿದರು. ನೈಸ್ ರಸ್ತೆ ನಿರ್ಮಾಣ ಮಾಡಿರುವುದು ಸಾರಿಗೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಈ ಯೋಜನೆಗಳ ಹಿಂದೆ ಅಡಗಿರುವ ರಾಜಕೀಯ ಸ್ವಾರ್ಥ ಹಾಗೂ ಹಿತಾಸಕ್ತಿಗಳ ಕುರಿತು ನಾನು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಸೂಕ್ತ ಸಮಯ ಬಂದಾಗ ಎಲ್ಲವನ್ನೂ ಸಾರ್ವಜನಿಕರ ಮುಂದೆ ಬಿಚ್ಚಿಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

