Mon. Aug 10th, 2026

ಜನಸಾಮಾನ್ಯರಿಗೆ ಯುಪಿಐ ಪಾವತಿ ಎಂದಿನಂತೆ ಸಂಪೂರ್ಣ ಉಚಿತ: ಶುಲ್ಕ ವದಂತಿಗಳಿಗೆ ಕೇಂದ್ರ ಸರ್ಕಾರ ಬ್ರೇಕ್

Share this with Friends

ನವದೆಹಲಿ: ಯುಪಿಐ (UPI) ಡಿಜಿಟಲ್ ಪಾವತಿಗಳ ಮೇಲೆ ಹೊಸದಾಗಿ ಸೇವಾ ಶುಲ್ಕ ವಿಧಿಸಲಾಗುತ್ತದೆ ಎಂಬ ಸಾರ್ವಜನಿಕರ ಆತಂಕ ಹಾಗೂ ವದಂತಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯವು ತೆರೆ ಎಳೆದಿದೆ. ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ‘ತೆರಿಗೆ ಮತ್ತು ಇತರೆ ಕಾಯ್ದೆಗಳ (ತಿದ್ದುಪಡಿ) ಮಸೂದೆ’ಯ ಬೆನ್ನಲ್ಲೇ ಎದ್ದಿದ್ದ ಗೊಂದಲಗಳಿಗೆ ಅಧಿಕೃತ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಜನಸಾಮಾನ್ಯರ ದಿನಬಳಕೆಯ ಯುಪಿಐ ವಹಿವಾಟುಗಳು ಎಂದಿನಂತೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಹೊರೆ ಇಲ್ಲ:

ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ (P2P) ಹಣ ವರ್ಗಾವಣೆ ಮಾಡುವುದು ಹಾಗೂ ಕಿರಾಣಿ ಅಂಗಡಿ, ತರಕಾರಿ ಮಾರುಕಟ್ಟೆ ಸೇರಿದಂತೆ ಶೇ. 90ಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳಿಗೆ ಕ್ಯೂಆರ್ (QR) ಕೋಡ್ ಮೂಲಕ ಹಣ ಪಾವತಿಸುವ ವ್ಯವಸ್ಥೆಗೆ ಯಾವುದೇ ಹೊಸ ಶುಲ್ಕ ಅನ್ವಯಿಸುವುದಿಲ್ಲ. ಹೊಸ ತಿದ್ದುಪಡಿ ಕಾಯ್ದೆಯು ಡಿಜಿಟಲ್ ಪಾವತಿ ವ್ಯವಸ್ಥೆಯ ತಂತ್ರಜ್ಞಾನ ನವೀಕರಣ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆಯೇ ಹೊರತು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಅಲ್ಲ ಎಂದು ಸರ್ಕಾರ ಹೇಳಿದೆ.

ದೊಡ್ಡ ವಾಣಿಜ್ಯ ವಹಿವಾಟುಗಳಿಗೆ ಮಾತ್ರ ನಿಯಮ:

ಭವಿಷ್ಯದಲ್ಲಿ ಒಂದು ವೇಳೆ ವ್ಯಾಪಾರಿ ರಿಯಾಯಿತಿ ದರ (MDR) ಜಾರಿಗೆ ಬಂದರೂ, ಅದು ಕೇವಲ ದೊಡ್ಡ ಉದ್ಯಮಗಳು ನಡೆಸುವ ಬೃಹತ್ ವಾಣಿಜ್ಯ ವಹಿವಾಟುಗಳಿಗೆ ಮಾತ್ರ ಸೀಮಿತವಾಗಿರಲಿದೆ. ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಮಾತ್ರ ಅತ್ಯಲ್ಪ ಪ್ರಮಾಣದ ಶುಲ್ಕ ವಿಧಿಸುವ ಸಾಧ್ಯತೆ ಇದ್ದು, ಇದು ಸಹ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆಯ ಶುಲ್ಕಕ್ಕಿಂತ ತೀರಾ ಕಡಿಮೆಯಾಗಿರಲಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 

 


Share this with Friends

Related Post