ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದು, ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನ ಸೇರಿದಂತೆ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಹಣ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಇದರೊಂದಿಗೆ ಹಾಲು ಉತ್ಪಾದಕರಿಗೆ ನೀಡಬೇಕಾದ ಕೋಟ್ಯಂತರ ರೂಪಾಯಿ ಪ್ರೋತ್ಸಾಹಧನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇತ್ತ ಮಳೆ ವಿಳಂಬದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು ಬರದ ಬಿಕ್ಕಟ್ಟಿಗೆ ಸಿಲುಕಿ ಕಂಗಾಲಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಹೈಕಮಾಂಡ್ ರಾಜಕಾರಣವೇ ಮುಖ್ಯ:
ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರಗೊಂಡಿದ್ದರೂ ಸರ್ಕಾರಕ್ಕೆ ಜನರ ಕಷ್ಟಗಳಿಗಿಂತ ಹೈಕಮಾಂಡ್ ರಾಜಕಾರಣವೇ ಮುಖ್ಯವಾಗಿದೆ. ಕೃಷಿ ಸಚಿವರು ಯಾರೆಂದು ಜನರಿಗೆ ತಿಳಿಯದಂತಾಗಿದ್ದು, ಮುಖ್ಯಮಂತ್ರಿಗಳು ಖಾತೆ ಹಂಚಿಕೆಗಾಗಿ ದೆಹಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನ ಅನುಮತಿ ಇಲ್ಲದೆ ರಾಜ್ಯದಲ್ಲಿ ಒಂದು ಕಡ್ಡಿಯೂ ಅಲುಗಾಡುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಪದೇಪದೇ ಸಾಬೀತುಪಡಿಸುತ್ತಿದ್ದಾರೆ. ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದರೂ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ದೂರಿದರು.
ಮೊದಲು ಬರ ಘೋಷಿಸಿ:
ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರೋಪಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, “ರಾಜ್ಯ ಸರ್ಕಾರವೇ ಮೊದಲು ತನ್ನ ವ್ಯಾಪ್ತಿಯಲ್ಲಿ ಬರ ಘೋಷಣೆ ಮಾಡಬೇಕು. ರಾಜ್ಯವೇ ಘೋಷಿಸದ ಮುನ್ನ ಕೇಂದ್ರ ಹೇಗೆ ಪರಿಹಾರ ನೀಡಲು ಸಾಧ್ಯ? ಬರ ಘೋಷಿಸದೆ ಕೇಂದ್ರ ಸರ್ಕಾರ ಪರಿಹಾರ ನೀಡಿರುವ ಒಂದು ಉದಾಹರಣೆಯನ್ನಾದರೂ ಖರ್ಗೆ ತೋರಿಸಲಿ” ಎಂದು ಸವಾಲು ಹಾಕಿದರು. ರೈತರ ಬದುಕಿನೊಂದಿಗೆ ಚೆಲ್ಲಾಟವಾಡದೆ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ರಾಜ್ಯದ ಜನತೆ ಎದುರಿಸುತ್ತಿರುವ ಇಂತಹ ಹತ್ತಾರು ಜ್ವಲಂತ ಸಮಸ್ಯೆಗಳ ಕುರಿತು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಸಮರ್ಥವಾಗಿ ಧ್ವನಿ ಎತ್ತಲಿದೆ. ಸದನವು ಸುಸೂತ್ರವಾಗಿ ನಡೆದು, ವಿರೋಧ ಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಸರ್ಕಾರ ಜವಾಬ್ದಾರಿಯುತವಾಗಿ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ನಾಗೇಂದ್ರ ಮರುಸೇರ್ಪಡೆಗೆ ತೀವ್ರ ವಿರೋಧ; ಸಚಿವ ಸ್ಥಾನದಿಂದ ಕೈಬಿಡಲು ಎಚ್ಚರಿಕೆ
ಇದೇ ವೇಳೆ ಸುಮಾರು ₹186 ಕೋಟಿ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ಸರ್ಕಾರದ ಕ್ರಮವನ್ನು ವಿಜಯೇಂದ್ರ ತೀವ್ರವಾಗಿ ಖಂಡಿಸಿದರು.
₹186 ಕೋಟಿ ಹಗರಣ ನಡೆದಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಸಂಪೂರ್ಣ ಕ್ಲೀನ್ ಚಿಟ್ ಸಿಗದಿದ್ದರೂ ಅವರನ್ನು ಮರುಸೇರ್ಪಡೆ ಮಾಡಿಕೊಂಡಿರುವುದು ಪರಿಶಿಷ್ಟ ಪಂಗಡದ (ST) ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡಿದ ದ್ರೋಹವಾಗಿದೆ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸರ್ಕಾರಕ್ಕೆ ಇದ್ದ ಅನಿವಾರ್ಯತೆ ಅಥವಾ ಭಯವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಅಧಿವೇಶನ ಆರಂಭವಾಗುವ ಮುನ್ನವೇ ನಾಗೇಂದ್ರ ಅವರ ರಾಜೀನಾಮೆ ಪಡೆಯದಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಸದನದ ಒಳಗೆ ಹಾಗೂ ಹೊರಗೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು

