ಬೆಂಗಳೂರು: “ನಾನು, ನನ್ನ ಮಂತ್ರಿ ಮಂಡಲ ಹಾಗೂ ಅಧಿಕಾರಿಗಳು ಸೇರಿದಂತೆ ನಾವೆಲ್ಲರೂ ಸರ್ಕಾರಿ ನೌಕರರು. ನಮ್ಮದು ‘ಟೀಮ್ ಕರ್ನಾಟಕ’ವಾಗಿದ್ದು, ಎಲ್ಲರೂ ಒಟ್ಟಾಗಿ ಶ್ರಮಿಸಿ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಪ್ರಮುಖ ಗುರಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸರ್ಕಾರಿ ನೌಕರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ಕೋಟ್ಯಂತರ ಜನರ ಸೇವೆ ಮಾಡುವ ಅಪರೂಪದ ಅವಕಾಶ ಸಿಕ್ಕಿರುವುದು ಕೇವಲ 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ನಮಗೆ ಸಿಕ್ಕಿರುವ ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಹಿಡಿದು ಇತಿಹಾಸದ ಪ್ರಮುಖ ನಾಯಕರು ತಮ್ಮದೇ ಆದ ಸಿದ್ಧಾಂತ ಹಾಗೂ ಶೈಲಿಯಲ್ಲಿ ಆಡಳಿತ ನಡೆಸಿದ್ದಾರೆ. ಹಿಂದಿನವರ ಕೆಲಸಗಳನ್ನು ತಾವು ಟೀಕಿಸುವುದಿಲ್ಲ ಎಂದ ಅವರು, “ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡುವ ಕೆಲಸಗಳು ಮಾತ್ರ ಎಂದಿಗೂ ಇತಿಹಾಸದಲ್ಲಿ ಉಳಿಯುತ್ತವೆ” ಎಂದು ಮಾರ್ಮಿಕವಾಗಿ ಹೇಳಿದರು.
ಇತಿಹಾಸ ಸೃಷ್ಟಿಸಲು ಬಯಸುತ್ತೇನೆ:
ಅಂಬೇಡ್ಕರ್ ಅವರ ‘ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ’ ಎಂಬ ಉಲ್ಲೇಖವನ್ನು ಸ್ಮರಿಸಿದ ಸಿಎಂ, “ನೌಕರರಾದ ನೀವು ಅಪಾರ ವಿದ್ಯೆ, ಕಠಿಣ ಶ್ರಮ ಹಾಗೂ ಅನುಭವ ಹೊಂದಿದ್ದೀರಿ. ಸರ್ಕಾರದ ನಾಡಿಮಿಡಿತ ಅರಿತಿರುವ ನೀವು, ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಭದ್ರವಾದ ಸೇತುವೆಯಾಗಿದ್ದೀರಿ. ನಾವು ಅಧಿಕಾರದಲ್ಲಿದ್ದಾಗ ಜನರ ಬದುಕಿನಲ್ಲಿ ಎಂತಹ ಬದಲಾವಣೆ ತಂದೆವು ಮತ್ತು ಯಾವ ಸಾಕ್ಷಿಗುಡ್ಡೆ ಬಿಟ್ಟು ಹೋದೆವು ಎಂಬುದು ಅತ್ಯಂತ ಮುಖ್ಯ” ಎಂದರು. ತಾವು ಇತಿಹಾಸವನ್ನು ಕೇವಲ ಓದಲು ಅಥವಾ ಬರೆಯಲು ಇಷ್ಟಪಡುವುದಿಲ್ಲ, ಬದಲಿಗೆ ನೌಕರರ ಸಹಕಾರದೊಂದಿಗೆ ಹೊಸ ಇತಿಹಾಸ ಸೃಷ್ಟಿಸಲು ಬಯಸುವುದಾಗಿ ತಿಳಿಸಿದರು.
ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ:
“ರಾಜ್ಯದಲ್ಲಿರುವಂತಹ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ದೇಶದ ಬೇರೆಲ್ಲೂ ಇಲ್ಲ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಮತ್ತು ಶಾಸಕರು ಸಾರ್ವಜನಿಕರ ಕೆಲಸಗಳನ್ನು ಯಾವ ರೀತಿ ನಿರ್ವಹಿಸುತ್ತಿದ್ದಾರೆ ಎಂಬುದನ್ನು ತಾವೇ ಖುದ್ದಾಗಿ ನಿರಂತರವಾಗಿ ಪರಿಶೀಲಿಸುವುದಾಗಿ ತಿಳಿಸಿದ ಸಿಎಂ, “ನಾವು ಕೆಲಸ ಮಾಡುವುದೇ ಜನರಿಗಾಗಿ. ಬೇರೆಯವರಿಗೆ ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ” ಎಂದು ಕಿವಿಮಾತು ಹೇಳಿದರು.
ಅಧಿಕಾರ ಎಂಬುದು ಸಿಂಹಾಸನವಲ್ಲ, ನಮ್ಮ ಗ್ಯಾರಂಟಿ ದೇಶಕ್ಕೇ ಮಾದರಿ:
“ಅಧಿಕಾರ ಎಂಬುದು ಕೇವಲ ಸಿಂಹಾಸನವಲ್ಲ, ಅದು ಜವಾಬ್ದಾರಿಯ ಸಂಕೇತ ಹಾಗೂ ಜನಸೇವೆಗೆ ಸಿಕ್ಕ ದೊಡ್ಡ ಅವಕಾಶ. ಮೂರ್ತಿಗೆ ಬೆಲೆ ಕಟ್ಟಬಹುದೇ ಹೊರತು ಭಗವಂತನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜನಸಾಮಾನ್ಯರಲ್ಲೇ ದೇವರನ್ನು ಕಾಣುವ ಗುಣ ನಮ್ಮದಾಗಬೇಕು” ಎಂದರು. ಇದೇ ವೇಳೆ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, “ನಮ್ಮ ಗ್ಯಾರಂಟಿ ಯೋಜನೆಗಳ ಕುರಿತು ವಿರೋಧ ಪಕ್ಷದವರು ಮತ್ತು ಶಾಸಕರು ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಸ್ವತಃ ದೇಶದ ಪ್ರಧಾನಮಂತ್ರಿಯವರೇ ಈ ಯೋಜನೆಗಳನ್ನು ವಿರೋಧಿಸಿದ್ದರು. ಆದರೆ, ಇಂದು ಅವರೇ ನಮ್ಮ ಯೋಜನೆಗಳನ್ನು ದೇಶಾದ್ಯಂತ ಪಾಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕರ್ನಾಟಕದ ಆಡಳಿತ ಮಾದರಿಯು ಇಂದು ಇಡೀ ದೇಶಕ್ಕೇ ಅತ್ಯುನ್ನತ ಮಾದರಿಯಾಗಿ ಹೊರಹೊಮ್ಮಿದೆ” ಎಂದು ಹೆಮ್ಮೆಯಿಂದ ನುಡಿದರು.

