Thu. Aug 13th, 2026

ಖರ್ಗೆ ಸಭೆ ನಡೆದ ಸ್ಥಳ ‘ಶುದ್ಧೀಕರಣ’: ಸಂವಿಧಾನಕ್ಕೆ ಎಸಗಿದ ಅಪಮಾನ ಎಂದ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗ ಸಭೆ ನಡೆಸಿದ್ದ ಸ್ಥಳವನ್ನು ‘ಶುದ್ಧೀಕರಣ’ ಮಾಡಿರುವ ಕೃತ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ನಾಚಿಕೆಗೇಡಿನ ಘಟನೆ ಹಾಗೂ ಭಾರತದ ಸಂವಿಧಾನಕ್ಕೆ ಎಸಗಿದ ಘೋರ ಅಪಮಾನ ಎಂದು ಅವರು ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ಈ ಅಮಾನವೀಯ ಘಟನೆಯು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾದ ನಿಂದನೆಯಲ್ಲ. ಇದು ನಮ್ಮ ಸಂವಿಧಾನವು ಎತ್ತಿಹಿಡಿದಿರುವ ಸಮಾನತೆಯ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ. ಆಧುನಿಕ ಭಾರತದಲ್ಲೂ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಅಸಹ್ಯಕರ ಮುಖವನ್ನು ಇದು ನೆನಪಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಲಿತ ನಾಯಕನೆಂಬ ಕಾರಣಕ್ಕೆ ತಾರತಮ್ಯ:

“ಮಲ್ಲಿಕಾರ್ಜುನ ಖರ್ಗೆಯವರು ದಶಕಗಳಿಂದ ಜನಸೇವೆಯಲ್ಲಿ ತೊಡಗಿರುವ ದೇಶದ ಅತ್ಯಂತ ಗೌರವಾನ್ವಿತ ನಾಯಕರು. ಒಬ್ಬ ದಲಿತ ಸಮುದಾಯದ ಮುಖಂಡ ಸಾರ್ವಜನಿಕ ಸ್ಥಳದಲ್ಲಿ ಭಾಷಣ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಆ ಜಾಗವನ್ನು ಶುದ್ಧೀಕರಿಸಬೇಕು ಎಂದು ಬಿಂಬಿಸಿರುವುದು ಸ್ಪಷ್ಟವಾದ ಜಾತಿ ತಾರತಮ್ಯವನ್ನು ತೋರಿಸುತ್ತದೆ. ಇದನ್ನು ಸಮಾನತೆ ಮತ್ತು ಮಾನವ ಘನತೆಯನ್ನು ಗೌರವಿಸುವ ಯಾವುದೇ ಭಾರತೀಯನೂ ಸಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಅಸ್ಪೃಶ್ಯತೆ ಸಾಂವಿಧಾನಿಕ ಅಪರಾಧ:

“ನಮ್ಮ ದೇಶದಲ್ಲಿ ಅಸ್ಪೃಶ್ಯತೆಯು ಕೇವಲ ಒಂದು ಆಚರಣೆಯಲ್ಲ, ಅದೊಂದು ಸಾಂವಿಧಾನಿಕ ಅಪರಾಧ ಮತ್ತು ನೈತಿಕ ಕಳಂಕವಾಗಿದೆ. ಇಂತಹ ಕೃತ್ಯಗಳನ್ನು ಬೆಂಬಲಿಸುವ ಅಥವಾ ಸಮರ್ಥಿಸಿಕೊಳ್ಳುವ ಮನಸ್ಥಿತಿಯವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಗಣರಾಜ್ಯದ ಅಡಿಪಾಯವನ್ನೇ ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಭಾರತದ ಸಾರ್ವಜನಿಕ ಜೀವನದಲ್ಲಿ ಇಂತಹ ತಾರತಮ್ಯದ ನಡವಳಿಕೆಗಳನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕನೂ ಗೌರವದಿಂದ ಬದುಕುವ ಹಕ್ಕನ್ನು ಹೊಂದಿದ್ದು, ಇಂತಹ ಘಟನೆಗಳನ್ನು ಸಮಾಜ ಮುಕ್ತ ಕಂಠದಿಂದ ತಿರಸ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

 

 


Share this with Friends

Related Post