ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಒಳಗೊಂಡ ಒಟ್ಟು ₹7,405.86 ಕೋಟಿ ರೂ. ಹಣವನ್ನು ಮುಖ್ಯಮಂತ್ರಿಗಳು ಒಮ್ಮೆಲೇ ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಪ್ರಕಟಿಸಿದ್ದಾರೆ.
ಬರಗಾಲದ ಕತ್ತಲಲ್ಲಿ ದೀಪಾವಳಿ ಬೆಳಕಾದ ‘ಗೃಹಲಕ್ಷ್ಮಿ’: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಬಾಕಿ ಇದ್ದ ಮೂರು ಕಂತುಗಳ ಧನಸಹಾಯವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗಿದ್ದು, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈವರೆಗೆ ಒಟ್ಟು 33 ಕಂತುಗಳ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ತಲುಪಿದ್ದು, ಇದೀಗ ಮುಂದಿನ ಮೂರು ಕಂತುಗಳು ಒಟ್ಟಿಗೆ ಮುಕ್ತಾಯಗೊಂಡಿವೆ.
ಕಂತುಗಳ ಹಣದ ವಿವರ:
34ನೇ ಕಂತು: ₹2,500 ಕೋಟಿ
35ನೇ ಕಂತು: ₹2,452.93 ಕೋಟಿ
36ನೇ ಕಂತು: ₹2,452.93 ಕೋಟಿ
ಒಟ್ಟು ಬಿಡುಗಡೆ: ₹7,405.86 ಕೋಟಿ
ಪ್ರತಿ ಯಜಮಾನಿಗೆ ₹72,000 ತಲುಪಿದ ಆಸರೆ:
ಈ ಮೂರು ಕಂತುಗಳ ಬಿಡುಗಡೆಯಿಂದಾಗಿ ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯದ ಒಟ್ಟು 1.24 ಕೋಟಿ ಮಹಿಳಾ ಫಲಾನುಭವಿಗಳಿಗೆ ಯೋಜನೆಯಡಿ ಒಟ್ಟಾರೆ ₹86,838.36 ಕೋಟಿ ರೂ. ಹಣ ತಲುಪಿದಂತಾಗಿದೆ. ಇದರಿಂದಾಗಿ ಯೋಜನೆಯ ಆರಂಭದಿಂದ ನಿಯಮಿತವಾಗಿ ಸೌಲಭ್ಯ ಪಡೆಯುತ್ತಿರುವ ಪ್ರತಿ ಮನೆಯ ಯಜಮಾನಿಯ ಖಾತೆಗೆ ಇದುವರೆಗೆ ತಲಾ ₹72,000 ಜಮೆಯಾದಂತಾಗಿದ್ದು, ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ಬಂದಿದೆ.
ಬರಗಾಲದಲ್ಲಿ ಆರ್ಥಿಕ ನೆರವು:
“ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವು ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಹಿಳೆಯರಿಗೆ ದೊಡ್ಡ ಆರ್ಥಿಕ ನೆರವಾಗಿದೆ. ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲೇ ಈ ಬೃಹತ್ ಮೊತ್ತವನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ತಾಯಂದಿರ ಮುಖದಲ್ಲಿ ನಗು ತಂದಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು,” ಎಂದು ದಿನೇಶ್ ಗೂಳಿಗೌಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

