ಬೆಂಗಳೂರು: “ನಮ್ಮ ಈವರೆಗಿನ ಸಾಧನೆಗಳಿಂದಲೇ ನಾವು ತೃಪ್ತರಾಗಿ ಕೂರುವುದಿಲ್ಲ. ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ವರ್ತಮಾನವನ್ನು ರೂಪಿಸಬೇಕಿದೆ” ಎಂಬ ಸ್ಪಷ್ಟ ದೃಷ್ಟಿಕೋನದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಂದಿನ ದಶಕಗಳ ಅಭಿವೃದ್ಧಿಗೆ ಮಹತ್ವಾಕಾಂಕ್ಷೆಯ ದಿಕ್ಸೂಚಿ ನೀಡಿದ್ದಾರೆ.
ರಾಜ್ಯದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕವನ್ನು ಕೇವಲ ಆರ್ಥಿಕವಾಗಿ ಬಲಿಷ್ಠಗೊಳಿಸುವುದಷ್ಟೇ ಅಲ್ಲದೆ ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ದೇಶದಲ್ಲೇ ಒಂದು ಸಮಗ್ರ ಮಾದರಿ ರಾಜ್ಯವನ್ನಾಗಿ ಪರಿವರ್ತಿಸುವ ದೃಢ ಸಂಕಲ್ಪ ಪ್ರಕಟಿಸಿದರು.
ದೇಶದ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿ ಕರ್ನಾಟಕ
ದೇಶದ ಒಟ್ಟು ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ. 5.5 ರಷ್ಟಿದ್ದರೂ, ದೇಶದ ಒಟ್ಟು ಆರ್ಥಿಕತೆಗೆ ರಾಜ್ಯ ನೀಡುತ್ತಿರುವ ಕೊಡುಗೆ ಬರೋಬ್ಬರಿ ಶೇ. 9.19 ರಷ್ಟಿದೆ. ಪ್ರಸ್ತುತ 2025-26ರ ಸಾಲಿನಲ್ಲಿ ರಾಜ್ಯದ ಜಿಎಸ್‌ಡಿಪಿ (GSDP) ₹32.81 ಲಕ್ಷ ಕೋಟಿಗೆ ತಲುಪಿದ್ದು, ಶೇ. 8.1ರಷ್ಟು ಗಣನೀಯ ನೈಜ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.
ಇದೇ ಆರ್ಥಿಕ ಬಲದ ಹಿನ್ನೆಲೆಯಲ್ಲಿ, ಸದ್ಯ $0.344 ಟ್ರಿಲಿಯನ್ ಇಲಾಖೆಯಷ್ಟಿರುವ ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು 2047ರ ವೇಳೆಗೆ $3 ಟ್ರಿಲಿಯನ್ ಡಾಲರ್‌ಗೆ ವಿಸ್ತರಿಸುವ ಬೃಹತ್ ಗುರಿಯನ್ನು ಮುಖ್ಯಮಂತ್ರಿಗಳು ರಾಜ್ಯದ ಮುಂದಿಟ್ಟಿದ್ದಾರೆ.
‘ಭಾರತದ ಬಲ ಕರ್ನಾಟಕ’ ಪರಿಕಲ್ಪನೆ
“ಭಾರತದ ಬಲ ಕರ್ನಾಟಕ” ಎಂಬ ಶೀರ್ಷಿಕೆಯಡಿ ರಾಜ್ಯದ ಆರ್ಥಿಕ ಪ್ರಗತಿಯು ಇಡೀ ರಾಷ್ಟ್ರದ ವಿಕಾಸಕ್ಕೆ ಪೂರಕ ಶಕ್ತಿಯಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ಮಹತ್ವಾಕಾಂಕ್ಷಿ ಗುರಿಯನ್ನು ತಲುಪಲು ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಕೈಗಾರಿಕಾ ಮೂಲಸೌಕರ್ಯ ವಲಯಗಳಲ್ಲಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗುವುದು ಎಂದು ಸಿಎಂ ವಿವರಿಸಿದರು.
‘ಬಿಯಾಂಡ್ ಬೆಂಗಳೂರು’ ಯೋಜನೆಗೆ ಮರುಜೀವ
ರಾಜ್ಯದ ಪ್ರಗತಿಯು ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಬಾರದು ಎಂಬ ಉದ್ದೇಶದಿಂದ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಭಾಗಗಳಿಗೂ ಹೂಡಿಕೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಕೊಂಡೊಯ್ಯುವ ‘ಬಿಯಾಂಡ್ ಬೆಂಗಳೂರು’ (Beyond Bengaluru) ಯೋಜನೆಗೆ ವಿಶೇಷ ಒತ್ತು ನೀಡುವುದಾಗಿ ಅವರು ಪ್ರಕಟಿಸಿದರು. ಈ ಮೂಲಕ ರಾಜ್ಯದ ಮೂಲೆ ಮೂಲೆಗಳಿಗೂ ಸಮಾನ ಪ್ರಗತಿಯ ಲಾಭ ತಲುಪಿಸುವ ವಿಕೇಂದ್ರೀಕೃತ ಅಭಿವೃದ್ಧಿಯ ಭರವಸೆಯನ್ನು ಅವರು ನೀಡಿದ್ದಾರೆ.
ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಿಟಿಸಿ (Global Technology Centres) ಸ್ಥಾಪಿಸುವ ಮೂಲಕ ಬೆಂಗಳೂರಿನ ಆಚೆಯೂ ಜಾಗತಿಕ ತಂತ್ರಜ್ಞಾನ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿರುವುದನ್ನು ವಿವರಿಸಿದರು.
GIS ಆಧಾರಿತ ಭೂ ಬ್ಯಾಂಕ್ ಹಾಗೂ ₹25,000 ಕೋಟಿ ಹೂಡಿಕೆಗೆ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮೋದನೆ ನೀಡುವ ಗುರಿಯ ಜೊತೆಗೆ, ಹೂಡಿಕೆಯನ್ನು ಉದ್ಯೋಗವಾಗಿ, ಉದ್ಯೋಗವನ್ನು ಪ್ರಾದೇಶಿಕ ಸಮೃದ್ಧಿಯಾಗಿ ಪರಿವರ್ತಿಸುವುದು ಮುಖ್ಯಮಂತ್ರಿಗಳ ದೂರದೃಷ್ಟಿಯ ಭಾಗವಾಗಿವೆ.ಯುವಕರು ಉದ್ಯೋಗಿಗಳಾಗಬೇಕು, ರೈತರು ಸಮೃದ್ಧರಾಗಬೇಕು, ಮಹಿಳೆ ಸ್ವಾವಲಂಬಿಗಳಾಗಬೇಕು, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಕಾರ್ಮಿಕರು ಗೌರವದಿಂದ ಬದುಕಬೇಕು ಮತ್ತು ಪ್ರತಿಯೊಂದು ಕುಟುಂಬವೂ ಅಭಿವೃದ್ಧಿಯ ಫಲವನ್ನು ಅನುಭವಿಸಬೇಕು ಎನ್ನುವುದು ನಮ್ಮ ದೂರದೃಷ್ಟಿಯ ಕೇಂದ್ರಬಿಂದುವಾಗಿದೆ ಎಂದು ವಿವರಿಸಿದರು.
“ಕನ್ನಡಕೋಟಿಯ ಕೈಗಳು ನನ್ನ ಜೊತೆ ಕೈಜೋಡಿಸಬೇಕು” ಎಂಬ ಮುಖ್ಯಮಂತ್ರಿಗಳ ಕರೆ, ಸರ್ಕಾರ ಏಕಪಕ್ಷೀಯವಾಗಿಲ್ಲ. ಜನರ ಸಹಭಾಗಿತ್ವದ ಮೂಲಕ ಕಟ್ಟಬೇಕಾದ ಭವಿಷ್ಯದ ಕರ್ನಾಟಕ ಎಂಬ ಸಂದೇಶವನ್ನು ಮುಖ್ಯಮಂತ್ರಿಗಳು ಒತ್ತಿ ಹೇಳಿದರು.

