Sun. Aug 16th, 2026

ಕಾಮನ್‌ವೆಲ್ತ್ ಗೇಮ್ಸ್‌ನ ಕೆಲವು ಕ್ರೀಡಾಕೂಟಗಳಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸುವ ಸಾಧ್ಯತೆ!

Share this with Friends

ಬೆಂಗಳೂರು: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜಾಗತಿಕ ಮಟ್ಟದ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಗೊಳ್ಳುತ್ತಿದ್ದು, ಈ ಬೃಹತ್ ಕ್ರೀಡಾಕೂಟದ ಕೆಲವು ಪ್ರಮುಖ ಕ್ರೀಡಾ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಐತಿಹಾಸಿಕ ಶ್ರೀ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸಲು ಸುಮಾರು ರೂ. 5,000 ಕೋಟಿ ವೆಚ್ಚದ ಬೃಹತ್ ಅಭಿವೃದ್ಧಿ ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಕಟಿಸಿದ್ದಾರೆ.

ಇಂದು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯು ಕಂಠೀರವ ಕ್ರೀಡಾಂಗಣದ ಕರ್ನಾಟಕ ಒಲಂಪಿಕ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಸಾಧನೆ ಮಾಡಿದ ಕಿರಿಯ, ಯುವಕರ ಬಾಸ್ಕೆಟ್‌ಬಾಲ್ ತಂಡಗಳಿಗೆ ಅಭಿನಂದಿಸಿ ಮಾತನಾಡಿದ ಅವರು, ಒಂದು ವೇಳೆ ನಿಗದಿತ ಸಮಯದೊಳಗೆ ಕಂಠೀರವ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಗೊಂಡರೆ, ಕಾಮನ್‌ವೆಲ್ತ್ ಗೇಮ್ಸ್‌ನ ಕೆಲವು ಪಂದ್ಯಾವಳಿಗಳು ನಮ್ಮ ಬೆಂಗಳೂರಿನಲ್ಲೇ ನಡೆಯಲಿವೆ. ಇದು ಜಾಗತಿಕ ಕ್ರೀಡಾ ಭೂಪಟದಲ್ಲಿ ಕರ್ನಾಟಕದ ಕ್ರೀಡಾ ಸಾಮರ್ಥ್ಯ ಹಾಗೂ ಅತ್ಯಾಧುನಿಕ ಮೂಲಸೌಕರ್ಯವನ್ನು ದೇಶ-ವಿದೇಶಗಳಿಗೆ ಪರಿಚಯಿಸಲು ಸಿಗಲಿರುವ ಸುವರ್ಣ ಅವಕಾಶವಾಗಿದೆ ಎಂದು ಡಿಸಿಎಂ ಆಶಯ ವ್ಯಕ್ತಪಡಿಸಿದರು.

ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ 5 ಎಕರೆ ಜಾಗ ಮತ್ತು ಅಂತಾರಾಷ್ಟ್ರೀಯ ಮಾದರಿ

ರಾಜ್ಯದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಸಮಗ್ರ ಬೆಳವಣಿಗೆಗಾಗಿ ಸರ್ಕಾರ ಈಗಾಗಲೇ 5 ಎಕರೆ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಿದೆ. ಕತಾರ್‌ನಲ್ಲಿ ನಡೆದ ವಿಶ್ವಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ಗಾಗಿ ನಿರ್ಮಿಸಲಾದ ಎಂಟು ವಿಶ್ವದರ್ಜೆಯ ಅತ್ಯುತ್ತಮ ಕ್ರೀಡಾಂಗಣಗಳ ಮಾದರಿಯಲ್ಲೇ ಕರ್ನಾಟಕದಲ್ಲೂ ಕ್ರೀಡಾ ಮೂಲಸೌಕರ್ಯ ತರಲಾಗುವುದು. ಇದರಿಂದಾಗಿ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ನೇರವಾಗಿ ರಾಜ್ಯದಲ್ಲೇ ಆಯೋಜಿಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ಕೇಂದ್ರವಾಗಿಸುವ ಗುರಿ

ತಾವು ಸ್ವತಃ ಕ್ರೀಡಾಪಟುವಾಗಿ ಮತ್ತು ಕ್ರೀಡಾ ಸಚಿವರಾಗಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ರಾಜ್ಯದ ಕ್ರೀಡಾ ರಂಗಕ್ಕೆ ಹೊಸ ದಿಕ್ಸೂಚಿ ನೀಡಲು ಈ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವುದಾಗಿ ಪರಮೇಶ್ವರ್ ತಿಳಿಸಿದರು. ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉನ್ನತ ಮಟ್ಟದ ಜಾಗತಿಕ ತರಬೇತಿ, ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಹಾಗೂ ಗರಿಷ್ಠ ಆರ್ಥಿಕ ಪ್ರೋತ್ಸಾಹ ನೀಡುವ ಮೂಲಕ ಕರ್ನಾಟಕವನ್ನು ಇಡೀ ದೇಶದಲ್ಲೇ ಅತ್ಯುನ್ನತ ‘ಸ್ಪೋರ್ಟ್ಸ್ ಹಬ್’ (Sports Hub) ಆಗಿ ಪರಿವರ್ತಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ:

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ತಲಾ  ರೂ‌ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗಿದೆ. ಪದಕ ವಿಜೇತರಿಗೆ ರೂ.15 ಲಕ್ಷ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಮೈಸೂರು ಮೂಲದ ಶಿಲ್ಪಾ ಅವರು ಭಾಗವಹಿಸಿ ಕಂಚಿನ ಪದಕ ಗೆದ್ದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸರ್ಕಾರ ಹಾಗೂ ಕ್ರೀಡಾ ಸಂಸ್ಥೆಗಳು ಪ್ರೋತ್ಸಾಹ ನೀಡುವುದು ಒಂದು ಭಾಗವಾಗಿದ್ದು, ಅದಕ್ಕೆ ಪೂರಕವಾಗಿ ಕ್ರೀಡಾಪಟುಗಳು ಶ್ರದ್ಧೆ, ಪರಿಶ್ರಮ ಮತ್ತು ಬದ್ಧತೆಯಿಂದ ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಶ್ರದ್ಧೆಯಿಂದ ಪ್ರಯತ್ನಿಸಿದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. ಒಬ್ಬ ಕ್ರೀಡಾಪಟುವಿನ ಬದ್ಧತೆ ಇಡೀ ತಂಡಕ್ಕೆ ಸ್ಪೂರ್ತಿಯಾಗಲಿದೆ ಎಂದು ಕಿವಿಮಾತು ಹೇಳಿದರು.

ಕ್ರೀಡಾ ಮೂಲಸೌಕರ್ಯಕ್ಕೆ ಆದ್ಯತೆ:

ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ತರಬೇತಿ ಪಡೆಯಲು ಕ್ರೀಡಾಪಟುಗಳನ್ನು ವಿದೇಶಗಳಿಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೇಂದ್ರ ಸರ್ಕಾರದ ‘ಖೇಲೋ ಇಂಡಿಯಾ’ ಕಾರ್ಯಕ್ರಮವೂ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ ಎಂದರು.

ದೇವನಹಳ್ಳಿ ಸಮೀಪ ಸುಮಾರು 60 ಎಕರೆ ಪ್ರದೇಶದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ವಿವಿಧ ಕ್ರೀಡೆಗಳನ್ನು ಒಂದೇ ಸಮಗ್ರ ಕ್ರೀಡಾ ಮೂಲಸೌಕರ್ಯದಲ್ಲಿ ನಡೆಸಲು ಅನುಕೂಲವಾಗುವಂತೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.

ರಾಜ್ಯದಲ್ಲಿ ಯಾವ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಾಗುತ್ತಿದೆಯೋ ಅಂತಹ ಕ್ರೀಡೆಗಳಿಗೆ ವಿಶೇಷ ಉತ್ತೇಜನ ನೀಡಲಾಗುವುದು. ಬ್ಯಾಸ್ಕೆಟ್‌ಬಾಲ್‌ನಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ. ಈಜು ಕ್ರೀಡೆಯಲ್ಲಿಯೂ ಕರ್ನಾಟಕವೂ ರಾಷ್ಟ್ರೀಯ ಮಟ್ಟದಲ್ಲಿ ಕಳೆದ 33 ವರ್ಷಗಳಿಂದ ಚಾಂಪಿಯನ್ ಆಗಿರುವುದು ರಾಜ್ಯದ ಕ್ರೀಡಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

 

 


Share this with Friends

Related Post