ಬೆಂಗಳೂರು:”ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಜನ್ಮದಲ್ಲಿ ಬದಲಾಗುವ ಯಾವ ಲಕ್ಷಣವೂ ಇಲ್ಲ. ಅದು ಸಾಧ್ಯವೂ ಇಲ್ಲ. ಅತಿ ವಿನಯಂ ದೂರ್ತ ಲಕ್ಷಣಂ ಎನ್ನುವಂತೆ ವರ್ತಿಸುವ ಈ ವ್ಯಕ್ತಿಯ ಅಸಲಿ ಬಣ್ಣ ನನಗೆ ಚೆನ್ನಾಗಿ ಗೊತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಬಿಡದಿ ಭಾಗದ ರೈತರು ಇವರ ಮುಂದೆ ಸೋಲಲು ನಾನು ಬಿಡುವುದಿಲ್ಲ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶಪಥ ಮಾಡಿದ್ದಾರೆ.
ಬಿಡದಿ ಟೌನ್‌ಶಿಪ್ ಹಾಗೂ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಜೆಡಿಎಸ್ ಆಯೋಜಿಸಿದ್ದ ವಿಧಾನಸೌಧ ಚಲೋ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು, “ಶಿವಕುಮಾರ್ ಅವರೇ, ನಿಮ್ಮ ತಂದೆ ಕೆಂಪೇಗೌಡರು ನೀವು ಮುಖ್ಯಮಂತ್ರಿ ಆದ ಮೇಲೆ ಸಾರ್ವಜನಿಕರ ಜತೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದನ್ನು ಸ್ವಲ್ಪ ನೆನಪು ಮಾಡಿಕೊಳ್ಳಿ” ಎಂದು ಕಠಿಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದರು.
ಸರ್ಕಾರದ ದುಡ್ಡು ನಿಮ್ಮಪ್ಪನ ಮನೆ ಆಸ್ತಿಯೇ?:
ಭೂಸ್ವಾಧೀನದ ನೀತಿಯನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, “ಮಿಸ್ಟರ್ ಡಿ.ಕೆ. ಶಿವಕುಮಾರ್, ಭೂಸ್ವಾಧೀನ ಮಾಡಿಕೊಳ್ಳುವುದು ಎಂದರೆ ನಿಮಗೇನು ಸಂತೆ ವ್ಯಾಪಾರ ಅಂದುಕೊಂಡಿದ್ದೀರಾ? ಸರ್ಕಾರದ ದುಡ್ಡೇನು ನಿಮ್ಮಪ್ಪನ ಮನೆ ಆಸ್ತಿಯೇ? ಜನಪ್ರತಿನಿಧಿ ಎಂದು ನಿಮಗೆ ಈ ರೀತಿ ವರ್ತಿಸಲು ಅಧಿಕಾರ ಕೊಟ್ಟವರು ಯಾರು? ಈಗಲ್ಟನ್ ರೆಸಾರ್ಟ್‌ನ ಕರಾಬು ಭೂಮಿಗೆ ಈ ಹಿಂದೆ 12 ಕೋಟಿ ರೂ. ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಈಗ ಬಡ ರೈತರ ಭೂಮಿಗೆ ಕೇವಲ 3 ಕೋಟಿ ರೂ. ಕೊಡುತ್ತೇವೆ ಎಂದು ರೈತರ ಮೂತಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದೀರಿ. ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಭೂಸ್ವಾಧೀನಕ್ಕೆ ಯಾವುದೇ ಅಂತಿಮ ನಿರ್ಧಾರ ಮಾಡಿರಲಿಲ್ಲ. ನೀವು ಮಾಡುತ್ತಿರುವ ದ್ರೋಹವನ್ನು ನನ್ನ ತಲೆಗೆ ಕಟ್ಟುವ ಹುನ್ನಾರ ನಡೆಸಬೇಡಿ” ಎಂದು ಕಿಡಿಕಾರಿದರು.
ನನ್ನನ್ನು ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ:
ಕಾಂಗ್ರೆಸ್ ನಾಯಕರಿಗೆ ನೇರ ಎಚ್ಚರಿಕೆ ನೀಡಿದ ಅವರು, “ಯಾವನೇ ಬಂದರೂ ನನ್ನನ್ನು ಹಣದಿಂದ ಖರೀದಿ ಮಾಡಲು ಸಾಧ್ಯವಿಲ್ಲ. ನಾನು ಸಿಎಂ ಆಗಿದ್ದಾಗ ಲಾಟರಿ ನಿಷೇಧ ಮಾಡಿದ ಅವಧಿಯಲ್ಲಿ ಚೆನ್ನೈನಿಂದ ಒಬ್ಬ ಉದ್ಯಮಿ ಸೂಟ್‌ಕೇಸ್ ಹಿಡಿದು ಬಂದಿದ್ದ. ಅವನಿಗೆ ನಾನು ಹೇಗೆ ಬುದ್ಧಿ ಕಲಿಸಿ ವಾಪಸ್ ಕಳುಹಿಸಿದೆ ಎಂಬುದನ್ನು ಇತಿಹಾಸ ಕೇಳಿ ತಿಳಿದುಕೊಳ್ಳಿ. ಮೊದಲು ನಿಮ್ಮ ಮುಖ್ಯಮಂತ್ರಿಗಳ ಮನೆ ಮುಂದೆ ಮಧ್ಯರಾತ್ರಿ ಎಂತೆಂತಹ ಜನ ಬಂದು ನಿಂತಿರುತ್ತಾರೆ ಎಂಬುದನ್ನು ನೋಡಿಕೊಳ್ಳಿ. ನೈಸ್ ಕಂಪನಿಯವನು 20 ವರ್ಷಗಳಾದರೂ ರೈತರಿಗೆ ಹಣ ಕೊಟ್ಟಿಲ್ಲ, ಆದರೂ ಸಾವಿರಾರು ಎಕರೆ ಭೂಮಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಅವನ ಜತೆ ನಿಮ್ಮ ಸಂಬಂಧವೇನು?” ಎಂದು ಪ್ರಶ್ನಿಸಿದರು.
ಪೊಲೀಸರಿಗೂ ಹೆಚ್‌ಡಿಕೆ ಎಚ್ಚರಿಕೆ:
ಇದೇ ವೇಳೆ ಪೊಲೀಸ್ ಇಲಾಖೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವರು, “ನನ್ನ ಪಕ್ಷದಲ್ಲಿ ಇರುವುದು ಶಾಂತಿಯುತವಾಗಿ ಹೋರಾಡುವ ಕಾರ್ಯಕರ್ತರು. ಅವರನ್ನು ಅನಗತ್ಯವಾಗಿ ಕೆಣಕಿ ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡಬೇಡಿ. ನಾನು ಮನಸ್ಸು ಮಾಡಿದರೆ ಕಾರ್ಯಕರ್ತರನ್ನು ವಿಧಾನಸೌಧಕ್ಕೂ ನುಗ್ಗಿಸಬಲ್ಲೆ, ಎಚ್ಚರಿಕೆ ಇರಲಿ” ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
“ನೈಸ್ ಕಂಪನಿ ಮಾಲೀಕ ಚೌಕಾಸಿ ಮಾಡಲು ಸಿಂಗಾಪುರಕ್ಕೆ ಬಂದಿದ್ದ”:
“ನಿಮ್ಮ ಕಾಂಗ್ರೆಸ್ ಪಕ್ಷದಲ್ಲೇ ಟಿ.ಬಿ. ಜಯಚಂದ್ರ ಅವರಂತಹ ಹಿರಿಯ ನಾಯಕರಿದ್ದಾರೆ. ಅವರ ನೇತೃತ್ವದಲ್ಲೇ ನೈಸ್ (NICE) ಯೋಜನೆಯ ಅಕ್ರಮಗಳ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚನೆಯಾಗಿತ್ತು. ಅವರು ಈ ಯೋಜನೆಯ ಬಗ್ಗೆ ಒಂದು ಬೃಹತ್ ವರದಿಯನ್ನೂ ನೀಡಿದ್ದಾರೆ. ಅಂದು ವರದಿ ಸಿದ್ಧಪಡಿಸುವ ಮುನ್ನ ರೈತರನ್ನು ಭೇಟಿಯಾಗಲು ಜಯಚಂದ್ರ ಅವರು ಬಿಡದಿ ಭಾಗಕ್ಕೆ ಬಂದಾಗ, ಅವರಿಗೆ ಧಮ್ಕಿ ಹಾಕಿ ಹಲ್ಲೆ ನಡೆಸಲು ಯತ್ನಿಸಿದವರು ಯಾರು? ಆ ವ್ಯಕ್ತಿ ಯಾರು ಎನ್ನುವುದು ನಿಮಗೆ ಗೊತ್ತಿಲ್ಲವೇ? ಮಾಧ್ಯಮಗಳು ಇವತ್ತೇ ಹೋಗಿ ಜಯಚಂದ್ರ ಅವರನ್ನ ಕೇಳಿದರೆ ಅವರು ಆ ಕಹಿ ಸತ್ಯವನ್ನು ಬಿಚ್ಚಿಡುತ್ತಾರೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ರಹಸ್ಯವನ್ನು ಬಯಲು ಮಾಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ಅವರು, ನೈಸ್ ಸಂಸ್ಥೆಯೊಂದಿಗಿನ ಸರ್ಕಾರದ ಆಂತರಿಕ ಸಂಬಂಧವನ್ನು ಬಹಿರಂಗವಾಗಿ ಪ್ರಶ್ನಿಸಿದರು.
ಸಿಂಗಾಪುರಕ್ಕೆ ಬಂದಿದ್ದ ನೈಸ್ ಮಾಲೀಕ:
“ಈ ನೈಸ್ ಕಂಪನಿಯವನು ಹಿಂದೆ ನನ್ನೊಂದಿಗೆ ಚೌಕಾಸಿ ಮಾಡಲು ನನ್ನನ್ನು ಹುಡುಕಿಕೊಂಡು ಸಿಂಗಾಪುರಕ್ಕೇ ಬಂದಿದ್ದ. ಆದರೆ, ಅವತ್ತು ನಾನು ಆತನನ್ನು ಮುಖ ಕೊಟ್ಟು ಮಾತನಾಡಿಸದೆ ಅಲ್ಲಿಂದಲೇ ವಾಪಸ್ ಕಳುಹಿಸಿದ್ದೆ. ಅಂತಹ ವ್ಯಕ್ತಿಯ ಜೊತೆ ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಸಂಬಂಧವೇನು? ಕೇವಲ ಹೊರಗೆ ನಿಂತು ನಾನು ಜನಪರ ಎಂದು ಬಣ್ಣದ ಮಾತುಗಳನ್ನಾಡುತ್ತಾ ಶೋ ಮಾಡುವುದಲ್ಲ. ನಿಮಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ, ಮೊದಲು ನೈಸ್ ಸಂಸ್ಥೆಯ ಅಕ್ರಮ ವಶದಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಬಡ ರೈತರಿಗೆ ವಾಪಸ್ ಕೊಡಿಸಿ. ಆಗ ನಾನು ನಿಮ್ಮ ಯೋಗ್ಯತೆಯನ್ನು ಮೆಚ್ಚಿಕೊಳ್ಳುತ್ತೇನೆ” ಎಂದು ಸವಾಲು ಹಾಕಿದರು.
ರೈತರು ಅಸಹಾಯಕರಲ್ಲ, ಎಚ್ಚರಿಕೆ ಇರಲಿ:
ರೈತರ ಶಕ್ತಿಯನ್ನು ಕಡೆಗಣಿಸಬೇಡಿ ಎಂದು ಎಚ್ಚರಿಸಿದ ಕುಮಾರಸ್ವಾಮಿ, “ಬಿಡದಿ ಭಾಗದ ಬಡ ರೈತರು ಸದ್ಯಕ್ಕೆ ಸುಮ್ಮನಿದ್ದಾರೆ ಎಂದ ತಕ್ಷಣ ಅವರು ಅಸಹಾಯಕರು ಎಂದು ಭಾವಿಸಬೇಡಿ. ಈ ದೇಶದಲ್ಲಿ ರೈತರು ತಮ್ಮ ಹಕ್ಕಿಗಾಗಿ ಯಾವ ಯಾವ ರೀತಿ ಐತಿಹಾಸಿಕ ಹೋರಾಟಗಳನ್ನು ನಡೆಸಿದ್ದಾರೆ ಎಂಬುದನ್ನು ಮರೆಯಬೇಡಿ. ಹೋರಾಟಕ್ಕೆ ನಿಂತರೆ ರೈತರ ಮುಂದೆ ನೀವೆಲ್ಲಾ ಯಾವ ಲೆಕ್ಕಕ್ಕೂ ಇಲ್ಲ” ಎಂದು ಸಿಎಂಗೆ ನೇರ ಎಚ್ಚರಿಕೆ ನೀಡಿದರು.
ಪ್ರಾಣ ಇರುವವರೆಗೂ ರೈತರ ಪರ ಹೋರಾಟ:
“ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಬಿಡದಿ ಭಾಗದ ರೈತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅವರ ಹಿತರಕ್ಷಣೆಗಾಗಿ ನಾನು ಎಷ್ಟು ದೂರ ಬೇಕಾದರೂ ಹೋಗುತ್ತೇನೆ, ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ಸಿದ್ಧನಿದ್ದೇನೆ. ನಿಮಗೆ ಒಳ್ಳೆಯ ಮಾತಿನಲ್ಲಿ ಕಿವಿಮಾತು ಹೇಳುತ್ತಿದ್ದೇನೆ; ಬಡವರ ಭೂಮಿಯನ್ನು ಅವರಿಗೆ ಬಿಟ್ಟುಬಿಡಿ. ನಿಮಗೆ ಟೌನ್‌ಶಿಪ್ ಮಾಡಲೇಬೇಕು ಎಂದಿದ್ದರೆ ಬೇರೆ ಬೇರೆ ಭಾಗಗಳಲ್ಲಿ ಬೇಕಾದಷ್ಟು ಬರಡು ಭೂಮಿಗಳಿವೆ, ಅಲ್ಲಿ ಹೋಗಿ ಮಾಡಿ. ಯಾವುದೇ ಕಾರಣಕ್ಕೂ ಬಿಡದಿ ರೈತರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ” ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

