ಬೆಂಗಳೂರು:ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ನೇರವಾಗಿ ಎದುರಿಸುವ ಧೈರ್ಯ ಹಾಗೂ ಶಕ್ತಿ ಪ್ರತಿಪಕ್ಷಗಳಿಗಿಲ್ಲ. ಇದೇ ಕಾರಣಕ್ಕೆ ಅವರು ಸದನದ ಕಾರ್ಯಕಲಾಪಗಳಿಗೆ ನಿರಂತರವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ವಿಧಾನಸೌಧದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಲಿ:
“ದೇಶದಲ್ಲಿ ನೆಲದ ಕಾನೂನಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ, ಪ್ರತಿಪಕ್ಷಗಳು ಕನಿಷ್ಠ ಒಂದು ನೋಟಿಸ್ ಕೂಡ ನೀಡದೆ ಗೂಂಡಾಗಿರಿ ಶೈಲಿಯಲ್ಲಿ ವರ್ತಿಸುತ್ತಾ ಅಧಿವೇಶನದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿವೆ. ಧರಣಿ ಕೂರುವುದು ತಪ್ಪಲ್ಲ, ಆದರೆ ನಿಯಮಾನುಸಾರ ನೋಟಿಸ್ ನೀಡಿ ಚರ್ಚೆಯಲ್ಲಿ ಭಾಗವಹಿಸಲಿ. ಸಚಿವರು ಏಕೆ ರಾಜೀನಾಮೆ ನೀಡಬೇಕು ಎಂಬುದನ್ನು ತಾರ್ಕಿಕವಾಗಿ ಚರ್ಚಿಸಲು ಅವರಿಗೆ ತಾಳ್ಮೆಯೇ ಇಲ್ಲ” ಎಂದು ಸಿಎಂ ಟೀಕಿಸಿದರು.
ದೇಶದ ಎಷ್ಟು ಸಚಿವರ ಮೇಲೆ ಮೊಕದ್ದಮೆಗಳಿವೆ ತಿಳಿಸಲಿ?
ಕೇಂದ್ರ ಸರ್ಕಾರದಲ್ಲಿರುವ ಎಷ್ಟು ಸಚಿವರ ಮೇಲೆ ಮೊಕದ್ದಮೆಗಳಿವೆ ಎಂಬ ಪಟ್ಟಿಯನ್ನು ಪ್ರತಿಪಕ್ಷಗಳು ಮೊದಲು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಅವರು, “ದೇಶದ ಯಾವ್ಯಾವ ಮುಖ್ಯಮಂತ್ರಿಗಳು ಮತ್ತು ಸಚಿವರ ಮೇಲೆ ಎಷ್ಟೆಷ್ಟು ಪ್ರಕರಣಗಳಿವೆ ಎಂಬುದನ್ನು ಮಾಧ್ಯಮಗಳೂ ಸಹ ದಾಖಲೆಗಳೊಂದಿಗೆ ಪರಿಶೀಲಿಸಿ ಪ್ರಶ್ನಿಸಬೇಕು” ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 15 ಮಂದಿ ಪರಿಶಿಷ್ಟ ಪಂಗಡದ ಶಾಸಕರು ಆಯ್ಕೆಯಾಗಿರುವುದನ್ನು ಸಹಿಸದ ಬಿಜೆಪಿ-ಜೆಡಿಎಸ್ ಮತ್ಸರದಿಂದ ಈ ರೀತಿ ಮಾಡುತ್ತಿವೆ. ಅವರ ಪಕ್ಷಗಳಲ್ಲಿ ಇಂತಹ ಸಮುದಾಯದ ನಾಯಕರು ಬೆಳೆಯದ ಕಾರಣಕ್ಕೆ ಈ ಹತಾಶೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಉದ್ಯಮಿ ಅದಾನಿ ಭೇಟಿ ಕೇವಲ ಸೌಜನ್ಯದ್ದು:
ಇದೇ ವೇಳೆ ಪ್ರಮುಖ ಉದ್ಯಮಿ ಗೌತಮ್ ಅದಾನಿ ಅವರು ತಮ್ಮನ್ನು ಭೇಟಿಯಾದ ಕುರಿತು ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್, “ನಾನು ಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗೌತಮ್ ಅದಾನಿ ಅವರು ಕೇವಲ ಸೌಜನ್ಯದ ಭೇಟಿ ನೀಡಿ ಮಾತುಕತೆ ನಡೆಸಿದ್ದಾರಷ್ಟೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ವಾಣಿಜ್ಯ ಉದ್ದೇಶವಿಲ್ಲ” ಎಂದು ಸ್ಪಷ್ಟಪಡಿಸಿದರು.

