ಶಿವಮೊಗ್ಗ: ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರದ ವತಿಯಿಂದಲೇ ಶಾಲಾ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.
ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಹಾಗೂ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ಹಮ್ಮಿಕೊಳ್ಳಲಾಗಿದ್ದ ಸುಮಾರು ₹1.02 ಕೋಟಿ ವೆಚ್ಚದ ವಿವಿಧ ಪ್ರಗತಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಪ್ರಧಾನಿಯ ಮನವಿಗೆ ತಕ್ಷಣದ ಸ್ಪಂದನೆ:
ಕಾರ್ಯಕ್ರಮದ ವೇಳೆ ಶಾಲಾ ಸಂಸತ್ತಿನ ವಿದ್ಯಾರ್ಥಿ ಪ್ರಧಾನಿ ಸಾನ್ವಿಕಾ ಅವರು, ಗ್ರಾಮೀಣ ಭಾಗದಿಂದ ಕೆಪಿಎಸ್ ಶಾಲೆಗೆ ಬರುವ ಮಕ್ಕಳಿಗೆ ತರಗತಿ ಮುಗಿದ ನಂತರ ಮನೆಗೆ ಮರಳಲು ಸೂಕ್ತ ಬಸ್ ಸೌಕರ್ಯವಿಲ್ಲದ ಸಮಸ್ಯೆಯನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು. ಈ ಮನವಿಗೆ ಸ್ಥಳದಲ್ಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ತಕ್ಷಣವೇ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರಿಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಮುಂದಿನ ವರ್ಷದಿಂದ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಸರ್ಕಾರಿ ವಾಹನ ವ್ಯವಸ್ಥೆ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ರಾಜ್ಯದ ಎಲ್ಲಾ ಕೆಪಿಎಸ್ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಿಷನ್:
ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಿಷನ್ ಅಳವಡಿಸುವಂತೆ ಸಾನ್ವಿಕಾ ನೀಡಿದ ಪ್ರಸ್ತಾವನೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು. “ಇದು ಅತ್ಯಂತ ಪ್ರಸ್ತುತ ಹಾಗೂ ಅಗತ್ಯವಾದ ಸಲಹೆಯಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಯೋಜನೆಯನ್ನು ರೂಪಿಸುವ ಮೂಲಕ ರಾಜ್ಯದ ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವರ ಜನಸ್ನೇಹಿ ನಡೆಗೆ ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

