Sun. Aug 23rd, 2026

ಬೆಂಗಳೂರು ಪಾರ್ಕ್‌ಗಳ ರಕ್ಷಣೆಗೆ ತೇಜಸ್ವಿ ಸೂರ್ಯ ಜನಾಂದೋಲನ: ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಸಾರ್ವಜನಿಕ ಉದ್ಯಾನವನಗಳ ರಕ್ಷಣೆಗಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಕ್ಷಾತೀತವಾಗಿ ಹೋರಾಡುವಂತೆ ಜನಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ.

ರಾಜ್ಯ ಸರ್ಕಾರವು ಉದ್ಯಾನವನಗಳ ಕಾಯ್ದೆಗೆ ತಿದ್ದುಪಡಿ ತಂದು, ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ಹಸಿರು ಹತ್ಯೆ: ಸಂಸದರ ಆಕ್ರೋಶ

“ಹಸಿರು ಉದ್ಯಾನವನಗಳು ಮಾರಾಟಕ್ಕಿಲ್ಲ, ಅವು ನಮ್ಮ ಹಕ್ಕು. ಇವುಗಳನ್ನು ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗಲು ಬಿಡುವ ಪ್ರಶ್ನೆಯೇ ಇಲ್ಲ” ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ. ಸರ್ಕಾರದ ಈ ತಿದ್ದುಪಡಿ ನಿರ್ಧಾರವು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ‘ಹಸಿರು ಹತ್ಯೆ’ಗೆ ಮುನ್ನುಡಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಇಂದು ಶೇ. 5 ರಷ್ಟು ಉದ್ಯಾನವನದ ಜಾಗ ಎನ್ನುವ ಸರ್ಕಾರ, ನಾಳೆ ಶೇ. 10 ಮತ್ತು ಮುಂದಿನ ದಿನಗಳಲ್ಲಿ ಸಂಪೂರ್ಣ ಉದ್ಯಾನವನವನ್ನೇ ವಶಪಡಿಸಿಕೊಳ್ಳಬಹುದು. ಒಮ್ಮೆ ಕಾಂಕ್ರೀಟ್ ಬಂದ ಮೇಲೆ ಮರಳಿ ಅಲ್ಲಿ ಮರ ನೆಡಲು ಸಾಧ್ಯವಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.

ಪಕ್ಷಭೇದ ಮರೆತು ಒಗ್ಗಟ್ಟಾಗಲು ಕರೆ

ಇದು ಕೇವಲ ರಾಜಕೀಯ ವಿಷಯವಲ್ಲ, ಬದಲಿಗೆ ಬೆಂಗಳೂರಿನ ಗಾಳಿ, ನೀರು, ಪರಿಸರ ಮತ್ತು ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ರಾಜ್ಯದ ಎಲ್ಲಾ ಶಾಸಕರು (MLAs), ಸಂಸದರು (MPs), ರಾಜ್ಯಸಭಾ ಸದಸ್ಯರು ಮತ್ತು ಸಚಿವರು ಪಕ್ಷಭೇದ ಮರೆತು ಸರ್ಕಾರದ ಈ ಅಪಾಯಕಾರಿ ನಿರ್ಧಾರದ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಸ್ಪಷ್ಟ ಮನವಿ ಮಾಡಿದ್ದಾರೆ.

ನಾಗರಿಕರ ನೈತಿಕ ಕರ್ತವ್ಯ

“ಸರ್ಕಾರಗಳು ಮತ್ತು ಅಧಿಕಾರ ಬದಲಾಗಬಹುದು, ಆದರೆ ಒಮ್ಮೆ ಹೋದ ಉದ್ಯಾನವನವನ್ನು ಮರಳಿ ತರಲು ಸಾಧ್ಯವಿಲ್ಲ. ಬೆಂಗಳೂರನ್ನು ರಿಯಲ್ ಎಸ್ಟೇಟ್ ರಣಹದ್ದುಗಳಿಗೆ ಬಲಿಕೊಡಬಾರದು. ನಿರ್ಮಾತೃ ಕೆಂಪೇಗೌಡರು ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರಂತಹ ದೂರದೃಷ್ಟಿಯುಳ್ಳವರು ಕಟ್ಟಿದ ಈ ನಗರವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಮತ್ತು ನಾಗರಿಕನ ನೈತಿಕ ಕರ್ತವ್ಯವಾಗಿದೆ” ಎಂದು ಅವರು ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.

 

 


Share this with Friends

Related Post